ಹಾಸನ: ಅರ್ಜುನ ಆನೆ ಸ್ಮಾರಕ ನಿರ್ಮಾಣ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಹಣ ಸಂಗ್ರಹಿಸಿದ ಆರೋಪ ಕೇಳಿ ಬಂದಿದ್ದು, ಮೈಸೂರಿನ ವ್ಯಕ್ತಿ ವಿರುದ್ಧ ಮಲೆನಾಡು ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ.
ಮೈಸೂರು ದಸರಾ ಅಂಬಾರಿ ಹೊರುತ್ತಿದ್ದ ಕ್ಯಾಪ್ಟನ್ ಅರ್ಜುನ ಆನೆ 2023 ಡಿಸೆಂಬರ್ ನಲ್ಲಿ ಸಕಲೇಶಪುರದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದು, ಅರ್ಜುನ ಆನೆಗೆ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ಹೇಳಿತ್ತು.
ಅರ್ಜುನ ಆನೆ ಸ್ಮಾರಕ ಹೆಸರಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಹಣ ಸಂಗ್ರಹಿಸುತ್ತಿರುವ ಆರೋಪ ಕೇಳಿ ಬಂದಿದೆ. ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್. ಎಂಬುವರು ಅರ್ಜುನ ಪಡೆ ಎಂಬ ಗ್ರೂಪ್ ಕ್ರಿಯೇಟ್ ಮಾಡಿ ಅರ್ಜುನ ಆನೆ ಸ್ಮಾರಕಕ್ಕೆ ಆರ್ಥಿಕ ನೆರವು ಕೋರಿದ್ದಾರೆ. ಇದನ್ನು ನಂಬಿದ ನೂರಾರು ಜನ ಹಣದ ಸಹಾಯ ಮಾಡಿದ್ದಾರೆ. ಮೈಸೂರಿನ ಯುವಕ ನವೀನ್ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಜಮಾ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಆರೋಪಿಸಿದ್ದಾರೆ.
ಆರೋಪಿತ ನವೀನ್ ಸ್ಮಾರಕ ನಿರ್ಮಾಣದ ಹೆಸರಲ್ಲಿ ನಟ ದರ್ಶನ್ ಆಪ್ತ ಸಹಾಯಕರನ್ನು ಸಂಪರ್ಕಿಸಿ ಕಲ್ಲು ತರಿಸಿಕೊಂಡಿದ್ದಾರೆ. ಅವುಗಳನ್ನು ಅರಣ್ಯ ಇಲಾಖೆಗೆ ಮಾರಾಟ ಮಾಡಿದ್ದಾರೆ. ನವೀನ್ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ ಎಂದು ಸಾಗರ್ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಘಟನೆಯಿಂದ ಪೊಲೀಸರಿಗೆ ದೂರು ನೀಡಿದ್ದಾರೆ