ಹಾಸನ: 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಾಡಾನೆ ದಾಳಿಯಿಂದ ಮೃತಪಟ್ಟಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಾಳೆಕೆರೆ ಅರಣ್ಯ ಪ್ರದೇಶದಲ್ಲಿ ಇಂದು ಘಟನೆ ನಡೆದಿದೆ.
ಕಾಡಾನೆ ಸೆರೆಗೆ ಅರ್ಜುನ ಆನೆ ಸೇರಿದಂತೆ ನಾಲ್ಕು ಪಳಗಿದ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಅರ್ಜುನ ಆನೆ ಮೇಲೆ ದಾಳಿ ಮಾಡಿದೆ. ಒಂಟಿ ಸಲಗದೊಂದಿಗೆ ಕಾದಾಟಕ್ಕಿಳಿದ ಅರ್ಜುನ ಆನೆ ಹೋರಾಟ ನಡೆಸುವಾಗ ಮೇಲಿದ್ದ ಮಾವುತರು ಕೆಳಗಿಳಿದಿದ್ದಾರೆ.
ಒಂಟಿ ಸಲಗ ಹೊಟ್ಟೆ ಭಾಗಕ್ಕೆ ತಿವಿದಿದ್ದರಿಂದ ಅರ್ಜುನ ಆನೆ ಸಾವನ್ನಪ್ಪಿದೆ. ನಾಡಿನ ಜನರ ಪ್ರೀತಿಗೆ ಪಾತ್ರವಾಗಿದ್ದ ಅರ್ಜುನ ಆನೆ 22 ಬಾರಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, 8 ಬಾರಿ ಅಂಬಾರಿ ಹೊತ್ತಿತ್ತು. ಅರ್ಜುನ ಆನೆ ನಿಧನಕ್ಕೆ ಮಾವುತರು ಕಣ್ಣೀರಿಟ್ಟಿದ್ದಾರೆ.
1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಅರ್ಜುನ ಆನೆಯನ್ನು ಸೆರೆಹಿಡಿಯಲಾಗಿತ್ತು. 64 ವರ್ಷದ ಅರ್ಜುನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಬಳ್ಳೆ ಆನೆ ಶಿಬಿರದಲ್ಲಿ ನೆಲೆಸಿತ್ತು.