ಗಾಯಗೊಂಡಿದ್ದ ಸಾರಸ್ ಕೊಕ್ಕರೆಯೊಂದನ್ನು ರಕ್ಷಿಸಿ ಆರೈಕೆ ಮಾಡಿ ಸುದ್ದಿಯಾಗಿದ್ದ ಆರೀಫ್ ಖಾನ್ ಗುಜ್ಜರ್ ಎಂಬ ವ್ಯಕ್ತಿ ವಿರುದ್ಧ ಉತ್ತರ ಪ್ರದೇಶ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಈ ಕುರಿತು ತಮ್ಮ ಹೇಳಿಕೆ ನೀಡುವಂತೆ ಆರೀಫ್‌ಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ವನ್ಯಜೀವಿ ಸಂರಕ್ಷಣೆ ಕಾಯಿದೆ ಅಡಿ ಈ ಪ್ರಕರಣ ದಾಖಲಿಸಲಾಗಿದೆ.
ಅಮೇಥಿ ಜಿಲ್ಲೆಯ ಮಂಡ್ಖಾ ಎಂಬ ಗ್ರಾಮದ ಆರೀಫ್ ತಮ್ಮ ಹೊಲದಲ್ಲಿ ಕಂಡು ಬಂದ ಈ ಕೊಕ್ಕರೆಗ ಆರೈಕೆ ಮಾಡಿ ಪೋಷಿಸಿ ತಮ್ಮೊಂದಿಗೆ ಇರಿಸಿಕೊಂಡಿದ್ದರು. ಆದರೆ ಅರಣ್ಯ ಇಲಾಖೆಯು ಮಾರ್ಚ್ 21ರಂದು ಈ ಪಕ್ಷಿಯನ್ನು ಆರೀಫ್‌ರಿಂದ ಕೊಂಡೊಯ್ದಿದ್ದು, ರಾಯ್ ಬರೇಯ್ಲಿ ಜಿಲ್ಲೆಯ ಸಾಮಾಸ್ಪುರ ಪಕ್ಷಿಧಾಮಕ್ಕೆ ವರ್ಗಾವಣೆ ಮಾಡಿದ್ದಾರೆ.
ಏಪ್ರಿಲ್ 4ರ ಒಳಗೆ ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಆರೀಫ್ ಖಾನ್‌ಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಸಹಾಯಕ ವಿಭಾಗೀಯ ಅರಣ್ಯಾಧಿಕಾರಿ (ಗೌರಿಗಂಜ್) ರಣವೀರ್ ಸಿಂಗ್ ತಿಳಿಸಿದ್ದಾರೆ.
ಆರೀಫ್ ಹಾಗೂ ಸಾರಸ್ ಕೊಕ್ಕರೆಯ ಸ್ನೇಹದ ಕುರಿತು ತಿಳಿದು ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಮನೆಗೆ ತೆರಳಿದ್ದ ವೇಳೆ ದೊಡ್ಡ ಸುದ್ದಿಯಾಗಿತ್ತು. ಈ ವೇಳೆ ಆರೀಫ್ ಹಾಗೂ ಕೊಕ್ಕರೆಯ ಚಿತ್ರಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು.
ಪಕ್ಷಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದ ಬಳಿಕ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವಾಸದಲ್ಲಿರುವ ನವಿಲುಗಳನ್ನು ವಶಕ್ಕೆ ಪಡೆಯುವ ಧೈರ್ಯ ಅಧಿಕಾರಿಗಳಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.