ಅರ್ಜೆಂಟೀನಾದ ಕ್ಯಾಟಮಾರ್ಕಾದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪಾದಚಾರಿ ಮೇಲ್ಸೇತುವೆಯನ್ನು ಕೊಚ್ಚಿಕೊಂಡು ಹೋಗಿದೆ. ಸುಮಾರು 600 ಜನರು ಇರುವ ಹಳ್ಳಿಯನ್ನು ಸಂಪರ್ಕಿಸುವ ಸೇತುವೆ ನೆರೆ ನೀರಿಗೆ ಸಿಕ್ಕಿ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಗ್ರಾಮಸ್ಥರು ಸಂಪರ್ಕ ಕಳೆದುಕೊಂಡಿದ್ದಾರೆ.
ಸ್ಥಳೀಯರು ಸೆರೆಹಿಡಿದಿರುವ ವಿಡಿಯೋದಲ್ಲಿ ಪ್ರವಾಹದ ರಭಸಕ್ಕೆ ಸಿಕ್ಕಿ ಸೇತುವೆ ಕೊಚ್ಚಿಕೊಂಡು ಹೋಗುವುದು, ನೆರೆಯ ರಭಸಕ್ಕೆ ಬೆದರಿ ಸ್ಥಳೀಯರು ಭಯಭೀತರಾಗಿ ಕೂಗುವುದು ಕಂಡುಬಂದಿದೆ. ವರದಿಯ ಪ್ರಕಾರ ನಾಲ್ಕು ಇಂಚಿನಷ್ಟು ಮಳೆಯಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ರಿಂಕನ್ ನದಿಯ ಪ್ರವಾಹದಿಂದ ಸೋಮವಾರ ಈ ಘಟನೆ ದಾಖಲಾಗಿದೆ. ಕಣ್ಣು ಮಿಟುಕಿಸುವುದರೊಳಗೆ ನದಿ ನೀರು ಸೇತುವೆಯನ್ನು ಕೊಚ್ಚಿಕೊಂಡು ಹೋಗಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ತಿಂಗಳ ಹಿಂದೆಯಷ್ಟೇ ಸೇತುವೆಯನ್ನು ಸಾರ್ವಜನಿಕರ ಅನುಕೂಲಕ್ಕೆ ತೆರೆಯಲಾಗಿತ್ತು.