ಅಡಿಕೆಗೆ ನಿಗದಿಯಾಗಿರುವ ಕನಿಷ್ಠ ಆಮದು ಬೆಲೆ(ಎಂಐಪಿ) ಪರಿಷ್ಕರಣೆಗೆ ಸಂಬಂಧಿಸಿದಂತೆ ಕೃಷಿ ಮತ್ತು ಕೃಷಿ ಕಲ್ಯಾಣ ಸಚಿವಾಲಯಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಅಡಿಕೆ ಅಕ್ರಮವಾಗಿ ದೇಶಕ್ಕೆ ಒಳನುಸುಳುವುದನ್ನು ತಡೆಯಲು ಕಠಿಣ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ್ದು, ಕೈಗೊಂಡ ಕ್ರಮದ ಬಗ್ಗೆ ಪಂಕಜ್ ಚೌಧರಿ ಕಾಗೇರಿಯವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಅಡಿಕೆಗೆ ಕನಿಷ್ಠ ಆಮದು ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿದೇಶಿ ವ್ಯವಹಾರಗಳ ನಿರ್ದೇಶನಾಲಯದಿಂದ ಕೃಷಿ ಸಚಿವಾಲಯಕ್ಕೆ ಪರಿಶೀಲನೆಗೆ ಶಿಫಾರಸು ಮಾಡಲಾಗಿದೆ. ಸದ್ಯ ಅಡಕೆಗೆ ಪ್ರತಿ ಕೆಜಿಗೆ 351 ರೂ. ಎಂಐಪಿಯನ್ನು ವಿದೇಶಿ ವ್ಯವಹಾರಗಳ ನಿರ್ದೇಶನಾಲಯ ನಿಗದಿ ಮಾಡಿದೆ. 2023ಕ್ಕೂ ಮೊದಲು 251 ರೂ. ಇತ್ತು. ಈ ಕನಿಷ್ಠ ಆಮದು ಬೆಲೆಗಿಂತಲೂ ಕಡಿಮೆ ಬೆಲೆಗೆ ದೇಶಕ್ಕೆ ಮಯನ್ಮಾರ್ ನಿಂದ ಅಡಿಕೆಯನ್ನು ಅಕ್ರಮವಾಗಿ ತರುವುದನ್ನು ತಡೆಯಲು ಕಠಿಣ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಡಿಕೆ ಆಮದು ಕೂಲಂಕಷವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಕ್ರಮ ಆಮದು ಆಗದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರ ಮಂಡಳಿ ಅಕ್ರಮ ಆಮದು ತಡೆಯಲು ಭಾರತ –ಮಯನ್ಮಾರ್, ಭಾರತ -ಬಾಂಗ್ಲಾ ಗಡಿಯಲ್ಲಿ ತೀವ್ರ ನಿಗಾ ವಹಿಸಿದೆ. ಈ ಆರ್ಥಿಕ ವರ್ಷದಲ್ಲಿ ಸೆಪ್ಟಂಬರ್ ಅಂತ್ಯದವರೆಗೆ 264.26 ಕೋಟಿ ರೂಪಾಯಿ ಮೌಲ್ಯದ ಅಕ್ರಮವಾಗಿ ಆಮದು ಮಾಡಲಾದ ಅಡಿಕೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಾಗೇರಿಯವರಿಗೆ ಪತ್ರ ಬರೆದು ಪಂಕಜ್ ಚೌಧರಿ ಮಾಹಿತಿ ನೀಡಿದ್ದಾರೆ.