ಮಂಗಳೂರು: ಮಾರುಕಟ್ಟೆಗೆ ನಕಲಿ ಅಡಿಕೆ ಬಂದಿದ್ದು, ಇದರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಎಚ್ಚರಿಕೆ ನೀಡಿದ.
ಪಶ್ಚಿಮ ಬಂಗಾಳದ ಕಸ್ಟಮ್ಸ್ ಕಚೇರಿಯಿಂದ ಕೆಲವು ಅಡಿಕೆ ಮಾದರಿಯನ್ನು ವಿಶ್ಲೇಷಣೆಗಾಗಿ ಅಧಿಕಾರಿಗಳು ಮಂಗಳೂರಿನ ಕ್ಯಾಂಪ್ಕೋದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾಣಕ್ಕೆ ಕಳುಹಿಸಿದ್ದಾರೆ. ಕಸ್ಟಮ್ಸ್ ಹೇಳಿಕೆಯ ಪ್ರಕಾರ 900 ಕೆಜಿಯಷ್ಟು ಕಳಪೆ ಅಡಿಕೆಯನ್ನು ತಡೆಹಿಡಿಯಲಾಗಿದೆ. ಇದರ ಮೌಲ್ಯ ಸುಮಾರು 4.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಅಂದ ಹಾಗೆ, ಇದು ಹೊರಗಿನಿಂದ ಕೆಂಪು ಅಡಿಕೆ ಬೆಟ್ಟೆ ಹೋಲುವ ರೀತಿಯಲ್ಲಿದೆ. ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ. ಕೇಶವ ಭಟ್ ಅವರು ಅದನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಅಸಲಿಗೆ ಅದು ಅಡಿಕೆಯೇ ಆಗಿರಲಿಲ್ಲ. ಯಾವುದೋ ಬೇರೆ ಕಾಯಿಯನ್ನು ತುಂಡರಿಸಿ ಅದಕ್ಕೆ ಅಡಿಕೆ ಚೊಗರು ಲೇಪಿಸಿರುವುದು ಕಂಡುಬಂದಿದೆ. ಅದು ಒಳಗೆ ಅಡಿಕೆಯಂತೆ ಇರದೆ ಕೇವಲ ಬಿಳಿ ಬಣ್ಣದಿಂದ ಇತ್ತು ಎನ್ನುವುದು ಗೊತ್ತಾಗಿದೆ.
ಇಂತಹ ನಕಲಿ ಅಡಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವವರು ಇರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ತಂದಿದೆ. ಅಡಿಕೆ ವರ್ತಕರು, ಕೆಂಪಡಿಕೆ ವ್ಯವಹಾರ ಮಾಡುವವರು ಜಾಗರೂಕತೆ ವಹಿಸಬೇಕು. ಇಂತಹ ಬೆಳವಣಿಗೆಯಿಂದ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತವಾಗುವ ಆತಂಕ ಎದುರಾಗಿದೆ ಎಂದು ಹೇಳಲಾಗಿದೆ.