ಬೆಂಗಳೂರು: ಮಲೆನಾಡಿನ ಕೆಲವು ಭಾಗಗಳಲ್ಲಿ ಅಡಕೆ ಬೆಳೆಗೆ ಎಲೆ ಚುಕ್ಕಿ ರೋಗ ಹಿನ್ನೆಲೆಯಲ್ಲಿ ರಾಜ್ಯ ಅಡಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ, ಮೀನುಗಾರಿಕೆ ಇಲಾಖೆ ಸಚಿವ ಎಸ್. ಅಂಗಾರ ಸೇರಿದಂತೆ ಹಲವರು ಭಾಗಿಯಾಗಿದ್ದು, ಹಾನಿ ಅನುಭವಿಸಿದ ರೈತರಿಗೆ ಆರ್ಥಿಕ ಪರಿಹಾರ ಒದಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ರೈತರಿಗೆ ಉಚಿತ ಔಷಧ ಹಾಗೂ ಸುಧಾರಿತ ದೋಟಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅಡಕೆ ಬೆಳೆ ಹಾನಿ ಬಗ್ಗೆ ಸರ್ವೆ ಕಾರ್ಯ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಅಡಕೆ ಎಲೆ ಚುಕ್ಕೆ ರೋಗದಿಂದ ರೈತರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಔಷಧ ಸಿಂಪಡಿಸಲಾಗುವುದು. ಸೋಮವಾರದಿಂದಲೇ ಔಷಧ ಸಿಂಪಡಿಸುವ ಕೆಲಸ ಮಾಡುತ್ತೇವೆ ಎಂದು ವಿಕಾಸ ಸೌಧದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಅಡಕೆ ಬೆಳೆ ರೋಗಗಳಿಂದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ಪರ್ಯಾಯ ಬೆಳೆಯುವಂತೆ ಸಲಹೆ ನೀಡುತ್ತೇವೆ. ಹಲವು ಪರ್ಯಾಯ ಬೆಳೆಗಳ ಪಟ್ಟಿ ಮಾಡಿದ್ದೇವೆ. ರೈತರಿಗೆ ಇಷ್ಟವಾದರೆ ಪರ್ಯಾಯ ಬೆಳೆಯಬಹುದು ರೈತರಿಗೆ ಅವಕಾಶ ನೀಡುತ್ತೇವೆ. ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.