ಈಗ ಕಂಪ್ಯೂಟರ್ ಬಳಸಿ ಕೆಲಸ ಮಾಡುವುದು ಎಂಬುದೇನೋ ನಿಜ. ಆದರೆ ದಿನವಿಡೀ ಕಂಪ್ಯೂಟರ್, ಮೊಬೈಲ್ ಪರದೆ ವೀಕ್ಷಿಸಿದ ಪರಿಣಾಮ ಕಣ್ಣುಗಳು ಬಾವು ಬರುತ್ತದೆ. ಸಂಜೆಯಾಗುತ್ತಲೇ ತಲೆನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವುದು ಹೇಗೆ?
ಕನಿಷ್ಠ ಎರಡು ಗಂಟೆಗಳಿಗೊಮ್ಮೆ ಎದ್ದು ಮುಖ ತೊಳೆಯಿರಿ. ಹೊರಗಿನ ಹಸಿರು ಮರಗಳನ್ನು ಕನಿಷ್ಠ 5 ನಿಮಿಷ ಹೊತ್ತು ವೀಕ್ಷಿಸಿ. ಐದು ನಿಮಿಷ ಕಣ್ಣು ಮುಚ್ಚಿ ಕುಳಿತುಕೊಳ್ಳಿ. ಕಣ್ಣಿಗೆ ಬದಲಾವಣೆ ಕೊಡಿ. ಸಾಕಷ್ಟು ನೀರು ಅಂದರೆ ದಿನಕ್ಕೆ ನಾಲ್ಕು ಲೀಟರ್ ನಷ್ಟು ನೀರು ಕುಡಿಯಲು ಮರೆಯದಿರಿ.
ಐಸ್ ಕ್ಯೂಬ್ ಗಳಿಂದ ಉಬ್ಬಿರುವ ಕಣ್ಣಿನ ಭಾಗಕ್ಕೆ ಮಸಾಜ್ ಮಾಡಿ. ಇದರಿಂದ ಕಣ್ಣ ಕೆಳಭಾಗ ಕಪ್ಪಾಗುವ ಸಮಸ್ಯೆ ದೂರವಾಗುತ್ತದೆ. ಸ್ವಚ್ಛವಾದ ಬಟ್ಟೆಯಲ್ಲಿ ಐಸ್ ಕ್ಯೂಬ್ ಅನ್ನು ಸುತ್ತಿ ಮಸಾಜ್ ಮಾಡುವುದು ಒಳ್ಳೆಯದು.
ಸೌತೆಕಾಯಿ ಹೋಳುಗಳನ್ನು ವೃತ್ತಾಕಾರದಲ್ಲಿ ಕತ್ತರಿಸಿ ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳಿ. ಹದಿನೈದು ನಿಮಿಷಗಳ ಕಾಲ ಇದನ್ನು ಇಟ್ಟುಕೊಂಡು ಮಲಗಿ. ಮಧ್ಯಾಹ್ನದ ಲಂಚ್ ಬ್ರೇಕ್ ಅವಧಿಯಲ್ಲಿ ಹೀಗೆ ಮಾಡಿಕೊಂಡರೆ ಕಣ್ಣಿಗೆ ವಿರಾಮವೂ ಸಿಗುತ್ತದೆ. ಬಾವು ಬರುವ ಸಮಸ್ಯೆಯೂ ದೂರವಾಗುತ್ತದೆ.