ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ದುಬಾರಿ ಬ್ರಾಂಡೆಡ್ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಬೆಲೆಬಾಳುವ ಬಟ್ಟೆಗಳೂ ಬೇಗನೆ ಮಸುಕಾಗಿಬಿಡುತ್ತವೆ. ಒಂದೇ ವಾಶ್ಗೆ ಬಣ್ಣ ಬಿಟ್ಟುಕೊಂಡು ಬಟ್ಟೆಗಳ ಹೊಳಪು ಮಾಯವಾಗುತ್ತದೆ. ಹಾಗಾಗಿ ದುಬಾರಿ ಬಟ್ಟೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಲೇಬೇಕು. ಬಟ್ಟೆಗಳ ಹೊಳಪು ಹೋಗದಂತೆ ಕಾಪಾಡಿಕೊಳ್ಳಲು ಕೆಲವೊಂದು ಸಲಹೆಗಳನ್ನು ಅನುಸರಿಸಬೇಕು. ಬಟ್ಟೆ ಒಗೆಯುವಾಗ ಕೆಲವೊಂದು ವಿಷಯಗಳನ್ನು ನೆನಪಿನಲ್ಲಿಡಿ.
ಹೆಚ್ಚು ಡಿಟರ್ಜೆಂಟ್ ಬಳಸಬೇಡಿ: ಡಿಟರ್ಜೆಂಟ್ನಲ್ಲಿ ರಾಸಾಯನಿಕವನ್ನು ಹೆಚ್ಚು ಬಳಸಲಾಗುತ್ತದೆ, ಆದ್ದರಿಂದ ಬಟ್ಟೆ ಒಗೆಯುವಾಗ ಹೆಚ್ಚು ಡಿಟರ್ಜೆಂಟ್ ಹಾಕಿದರೆ ಬಣ್ಣ ಮಾಸುವಿಕೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಬಟ್ಟೆ ಒಗೆಯುವಾಗ ಯಾವಾಗಲೂ ಸೀಮಿತ ಪ್ರಮಾಣದ ಡಿಟರ್ಜೆಂಟ್ ಅನ್ನು ಬಳಸಿ.
ಬಟ್ಟೆ ಒಣಗಿಸುವಾಗ ನೆನಪಿಡಿ: ಬಟ್ಟೆ ಒಗೆದ ನಂತರ ಅನೇಕರು ಬಟ್ಟೆಗಳನ್ನು ಚೆನ್ನಾಗಿ ಹಿಂಡಿ ನೇರ ಸೂರ್ಯನ ಬೆಳಕಿನಲ್ಲಿ ಹಾಕುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಬಟ್ಟೆಯ ಬಣ್ಣ ಮಸುಕಾಗುತ್ತದೆ. ಆದ್ದರಿಂದ ತೊಳೆದ ನಂತರ ಬಟ್ಟೆಗಳನ್ನು ಹಿಂಡಬೇಡಿ, ನೀರು ಇಳಿದ ಬಳಿಕ ಬಿಸಿಲಿನಲ್ಲಿ ಒಣಗಲು ಹಾಕಿ, ಆದರೆ ಅವುಗಳನ್ನು ಉಲ್ಟಾ ಮಾಡಿ ಒಣಗಿಸಿ. ಹೀಗೆ ಮಾಡುವುದರಿಂದ ಬಟ್ಟೆಯ ಬಣ್ಣ ಮಾಸುವುದಿಲ್ಲ.
ಬಿಸಿ ನೀರಿನಿಂದ ಬಟ್ಟೆ ಒಗೆಯಬೇಡಿ: ಅನೇಕರು ಬಟ್ಟೆ ಒಗೆಯಲು ಬಿಸಿ ನೀರನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ಬಟ್ಟೆಯ ಬಣ್ಣವು ತ್ವರಿತವಾಗಿ ಹೊರಬರುತ್ತದೆ. ಯಾವಾಗಲೂ ತಣ್ಣೀರಿನಲ್ಲೇ ಬಟ್ಟೆ ಒಗೆಯಬೇಕು.
ಬಟ್ಟೆಯನ್ನು ದೀರ್ಘಕಾಲ ನೆನೆಸಬೇಡಿ: ಬಟ್ಟೆಗಳನ್ನು ಡಿಟರ್ಜೆಂಟ್ ನೀರಿನಲ್ಲಿ ದೀರ್ಘಕಾಲ ನೆನೆಸಿಟ್ಟರೂ ಅವು ಬಣ್ಣ ಕಳೆದುಕೊಳ್ಳಲು ಪ್ರಾರಂಭಿಸುತ್ತವೆ. ಜೊತೆಗೆ ಬಟ್ಟೆಯಿಂದ ದುರ್ವಾಸನೆ ಬರಲಾರಂಭಿಸುತ್ತದೆ. ಬಟ್ಟೆಗಳನ್ನು ನೀರಿನಲ್ಲಿ ಅರ್ಧ ಗಂಟೆಗಿಂತ ಹೆಚ್ಚು ಸಮಯ ನೆನೆಸಿ ಇಡಬೇಡಿ. ಸ್ವಲ್ಪ ಹೊತ್ತು ನೆನೆಸಿಟ್ಟು ತೊಳೆದರೆ ಬಟ್ಟೆಯ ಹೊಳಪು ಹಾಗೇ ಇರುತ್ತದೆ.