ರಾತ್ರಿ ತುಂಬಾ ಹೊತ್ತು ಎಚ್ಚರವಾಗಿರುವ ಕಾರಣ ಬೆಳ್ಳಿಗೆ ಬೇಗ ಏಳೋದು ಅನೇಕರಿಗೆ ಕಷ್ಟ. ಮನೆಯ ಹಿರಿಯರು ಬೆಳಿಗ್ಗೆ ಬೇಗ ಏಳುವಂತೆ ಯುವಕರಿಗೆ ಹೇಳ್ತಿರುತ್ತಾರೆ. ಇದ್ರಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿ ಜೊತೆಗೆ ಮನಸ್ಸು ಉಲ್ಲಾಸಿತವಾಗಿರುತ್ತದೆ. ಬಹುತೇಕರು ಬೆಳಿಗ್ಗೆ ಬೇಗ ಏಳಲು ಪ್ರಯತ್ನಿಸ್ತಾರೆ. ಆದ್ರೆ ಏಳೋದು ಕಷ್ಟವಾಗುತ್ತೆ. ಅಂತವರಿಗೆ ಇಲ್ಲಿದೆ ಸುಲಭ ಟಿಪ್ಸ್.
ಬೆಳಿಗ್ಗೆ ಏಳಬೇಕೆಂಬ ಕಾರಣಕ್ಕೆ ಅಲರಾಂ ಇಟ್ಟಿರುತ್ತೇವೆ. ಆದ್ರೆ ತಲೆ ಬದಿಯಲ್ಲಿರುವ ಅಲರಾಂ ಬಂದ್ ಮಾಡಿ ಮತ್ತೆ ಮಲಗಿಬಿಡ್ತಾರೆ. ಆದ್ರೆ ಅಲರಾಂ ಸ್ವಲ್ಪ ದೂರದಲ್ಲಿಟ್ಟರೆ ಅಲರಾಂ ಬಂದ್ ಮಾಡಲು ಏಳಬೇಕಾಗುತ್ತದೆ. ಆಗ ಎಚ್ಚರವಾಗುತ್ತೆ. ಎರಡು ದಿನ ಹೀಗೆ ಮಾಡಿದ್ರೆ ಮೂರನೇ ದಿನ ಆ ಸಮಯಕ್ಕೆ ನಿಮಗೆ ಎಚ್ಚರವಾಗೋದ್ರಲ್ಲಿ ಅನುಮಾನವಿಲ್ಲ.
ರಾತ್ರಿ ಮಲಗುವ ಮೊದಲು ಒಂದು ಬಾಟಲಿ ನೀರನ್ನು ಹಾಸಿಗೆ ಬಳಿ ಇಟ್ಟು ಮಲಗಿ. ಮಧ್ಯೆ ಎಚ್ಚರವಾದಾಗ ಕಣ್ಣು ಹಾಗೂ ಮುಖಕ್ಕೆ ಸ್ವಲ್ಪ ನೀರನ್ನು ಹಾಕಿ ಮಲಗಿ. ಹೀಗೆ ಮಾಡಿದ್ರೆ ಬೆಳಿಗ್ಗೆ ಬೇಗ ಎಚ್ಚರವಾಗಲಿದೆ.
ರಾತ್ರಿ ಮಲಗುವ ಒಂದು ಗಂಟೆ ಮೊದಲು ಮೊಬೈಲ್ ಬಳಕೆ ಮಾಡಬೇಡಿ. ತಡರಾತ್ರಿಯವರೆಗೂ ಮೊಬೈಲ್ ಬಳಕೆ ಮಾಡುವುದು ಅನಿದ್ರೆಗೆ ಕಾರಣವಾಗುತ್ತದೆ. ಇದ್ರಿಂದ ಬೆಳಿಗ್ಗೆ ಬೇಗ ಎಚ್ಚರವಾಗುವುದಿಲ್ಲ.
ರಾತ್ರಿ ಮಲಗುವ ಮೊದಲು ಒಳ್ಳೆ ಪುಸ್ತಕವನ್ನು ಓದಿ. ಇದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ ಕಡಿಮೆಯಾಗಿ ಬೇಗ ನಿದ್ರೆ ಬರುತ್ತದೆ. ಬೆಳಿಗ್ಗೆ ಬೇಗ ಏಳಲು ನೆರವಾಗುತ್ತದೆ.
ರಾತ್ರಿ ಮಲಗುವ ಮೊದಲು ನಾಳೆ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಳ್ಳಿ. ಬೇಗ ಎದ್ರೆ ಎಲ್ಲ ಕೆಲಸ ಸರಾಗವಾಗಿ ಸಾಗುತ್ತೆ ಎಂಬುದನ್ನು ಮನಸ್ಸಿನಲ್ಲಿಯೇ ಹೇಳಿಕೊಳ್ಳಿ.