ಮನೆಯೊಳಗೆ ಇಲಿ ಸೇರಿಕೊಂಡಿದೆಯೇ? ನಿಮ್ಮ ಮನೆಯ ಬೆಕ್ಕು ಅದನ್ನು ಹಿಡಿಯುವ ಮನಸ್ಸು ಮಾಡುತ್ತಿಲ್ಲವೇ? ಹಾಗಿದ್ದರೆ ಇಲ್ಲಿ ಕೇಳಿ.
ಮಳಿಗೆಗಳಲ್ಲಿ ಸಿಗುವ ಇಲಿ ಪಾಷಾಣಗಳನ್ನು ತಂದು ಅದನ್ನು ಬೆಕ್ಕು ತಿನ್ನುವಂತಾಗಿ ಪರಿತಪಿಸುವ ಬದಲು ಮನೆಯಲ್ಲಿ ಇರುವ ಕೆಲವು ನೈಸರ್ಗಿಕ ವಸ್ತುಗಳ ಮೂಲಕವೂ ಇಲಿಯನ್ನು ಓಡಿಸಬಹುದು. ಪುದೀನಾ ಎಣ್ಣೆಯನ್ನು ಹತ್ತಿ ಚೆಂಡುಗಳಲ್ಲಿ ಮನೆಯ ಸುತ್ತಲೂ ಬಿಡಿ. ವಿಶೇಷವಾಗಿ ಬಾಗಿಲ ಬಳಿ, ಕಿಚನ್ ನಲ್ಲಿ ಹಾಗೂ ಬಾತ್ ರೂಮ್ ಪಕ್ಕ ಇಡಿ ಇದರ ವಾಸನೆಗೆ ಇಲ್ಲಿ ಹತ್ತಿರವೂ ಸುಳಿಯುವುದಿಲ್ಲ.
ಕೆಂಪು ಮೆಣಸು ಅಥವಾ ಬ್ಯಾಡಗಿ ಮೆಣಸಿಗೆ ಇದೇ ಗುಣವಿದೆ. ಇದನ್ನು ಸಣ್ಣ ಬಟ್ಟೆಯ ತುಂಡುಗಳಲ್ಲಿ ಕಟ್ಟಿ ನಿಮ್ಮ ಮನೆಯ ಸುತ್ತ ಇಟ್ಟರೆ ಇಲಿಗಳು ಹತ್ತಿರ ಸುಳಿಯುವುದಿಲ್ಲ. ಲವಂಗದ ಎಣ್ಣೆ ಯಿಂದಲೂ ಇದೇ ಪ್ರಯೋಜನ ಪಡೆಯಬಹುದು.
ಮಕ್ಕಳು ಹಾಗೂ ಇತರ ಸಾಕುಪ್ರಾಣಿಗಳು ಮನೆಯಲ್ಲಿರುವ ಸಂದರ್ಭದಲ್ಲಿ ಅಡುಗೆ ಸೋಡಾವನ್ನು ಇಲಿಗಳು ಬರುವ ಜಾಗದಲ್ಲಿ ಉದುರಿಸಿದರೆ ಸಾಕು. ಅದು ಮತ್ತೆ ಆ ಕಡೆಗೆ ಸುಳಿಯುವುದಿಲ್ಲ. ಮರುದಿನ ಎದ್ದು ಆ ಪುಡಿಯನ್ನು ಕ್ಲೀನ್ ಮಾಡಿ. ಈರುಳ್ಳಿಯನ್ನು ಸ್ಲೈಸ್ ಆಗಿ ಕತ್ತರಿಸಿ ಮೂಲೆಮೂಲೆಗಳಲ್ಲಿ ಹರಡುವುದರಿಂದ ಇಲಿ ಮಾತ್ರವಲ್ಲ ಹಲ್ಲಿಗಳ ಸಮಸ್ಯೆಗಳು ದೂರವಾಗುತ್ತದೆ. ಆದರೆ ಇದು ಬಹು ಬೇಗ ಹಾಳಾಗುವುದರಿಂದ ಎರಡು ದಿನಕ್ಕೊಮ್ಮೆ ಇದನ್ನು ಬದಲಾಯಿಸುತ್ತಿರಬೇಕು.