ಬೆಳಿಗ್ಗೆ ಎದ್ದ ತಕ್ಷಣ ಕೆಲವರಿಗೆ ಬೆಡ್ ಮೇಲೆಯೇ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಉತ್ತಮವಲ್ಲ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಯುರ್ವೇದದ ಪ್ರಕಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಪಿತ್ತರಸದ ಚಲನೆಯ ಪ್ರಕ್ರಿಯೆಯನ್ನು ತಡೆಯುತ್ತದೆ. ಇದು ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ. ಬೆಡ್ ಟೀ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಗ್ಯಾಸ್, ಆ್ಯಸಿಡಿಟಿ, ಮಲಬದ್ಧತೆ, ಅಜೀರ್ಣ, ವಾಯು ಮತ್ತು ಹೊಟ್ಟೆ ಉರಿ ಸಮಸ್ಯೆ ಕಾಡುತ್ತದೆ.
ದೀರ್ಘಕಾಲದವರೆಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಣ್ಣು ಉಂಟಾಗುತ್ತದೆ. ಇದು ಗಂಭೀರ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಈ ಅಭ್ಯಾಸವನ್ನು ನಿಲ್ಲಿಸಿ.
ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ ಮೂಳೆಗಳಿಗೆ ಹಾನಿಯಾಗುತ್ತದೆ. ದೇಹದಲ್ಲಿ ವಾತ ದೋಷ ಹೆಚ್ಚಾಗುತ್ತದೆ. ಇದರಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಇದರಿಂದ ಕೀಲುನೋವಿನ ಸಮಸ್ಯೆ ಕಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ಮಾಡುವುದು ಕೋಪ, ಕಿರಿಕಿರಿ ಮತ್ತು ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೇ ಕೆಫೀನ್ ದೇಹದಲ್ಲಿ ವೇಗವಾಗಿ ಕರಗುವುದರಿಂದ ಹೃದಯ ಬಡಿತ ಮತ್ತು ರಕ್ತದೊತ್ತಡ ಸಮಸ್ಯೆ ಕಾಡುತ್ತದೆ.