ಭಾರತದಲ್ಲಿ ಅಕ್ಕಿ ಪ್ರಮುಖ ಆಹಾರ ಧಾನ್ಯಗಳಲ್ಲೊಂದು. ಬಹುತೇಕರು ಪ್ರತಿನಿತ್ಯ ಅನ್ನವನ್ನೇ ಸೇವನೆ ಮಾಡ್ತಾರೆ. ಆದ್ರೆ ಚೆನ್ನಾಗಿ ಪಾಲಿಶ್ ಮಾಡಿದ ಬಿಳಿ ಅಕ್ಕಿಯ ಅನ್ನವನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಸೂಕ್ತ ಅನ್ನೋ ಪ್ರಶ್ನೆ ಕಾಡೋದು ಸಹಜ.
ಪ್ರತಿದಿನ ಈ ಬಿಳಿ ಅನ್ನವನ್ನು ತಿನ್ನುವುದರಿಂದ ನಿಮಗೆ ಅನೇಕ ದೊಡ್ಡ ಸಮಸ್ಯೆಗಳಾಗಬಹುದು. ನಿಮ್ಮ ಬಿಪಿ ಹೆಚ್ಚಾಗುವ ಅಪಾಯವಿರುತ್ತದೆ, ಮಧುಮೇಹ ಮತ್ತು ಬೊಜ್ಜು ಕೂಡ ಬರಬಹುದು. ಬಿಳಿ ಅಕ್ಕಿ ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ರೀತಿಯಲ್ಲಿ ಹಾನಿ ಮಾಡುತ್ತದೆ ಅನ್ನೋದನ್ನು ನೋಡೋಣ.
ಹೃದಯಕ್ಕೆ ಅಪಾಯ : ಪಾಲಿಶ್ ಮಾಡಿದ ಬಿಳಿ ಅಕ್ಕಿಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಯಾವುದೇ ಪೋಷಕಾಂಶಗಳಿಲ್ಲ. ಆದ್ದರಿಂದ ನೀವು ಪ್ರತಿದಿನ ಅನ್ನವನ್ನು ತಿನ್ನುತ್ತಿದ್ದರೆ ನಿಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗುವುದಿಲ್ಲ. ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯ ಪ್ರಕಾರ ಈ ಬಿಳಿ ಅನ್ನವನ್ನು ನಿಯಮಿತವಾಗಿ ತಿನ್ನುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ.
ಮೆಟಬಾಲಿಕ್ ಸಿಂಡ್ರೋಮ್ ಸಮಸ್ಯೆ ಹೆಚ್ಚಾಗಬಹುದು : ಮೆಟಬಾಲಿಕ್ ಸಿಂಡ್ರೋಮ್ ಸಮಸ್ಯೆಯು ಬಿಳಿ ಅನ್ನವನ್ನು ತಿನ್ನುವುದರಿಂದ ಕೂಡ ಉಂಟಾಗುತ್ತದೆ. ಹಾಗಾಗಿ ತಿಂಗಳಿಗೊಮ್ಮೆ ಮಾತ್ರ ಬಿಳಿ ಅನ್ನವನ್ನು ತಿನ್ನಲು ಪ್ರಯತ್ನಿಸಿ. ಬಿಳಿ ಅಕ್ಕಿಯ ಅನ್ನ ಸೇವನೆ ಮಾಡುವುದರಿಂದ ನಿಮ್ಮ ಚಯಾಪಚಯ ಕ್ರಿಯೆಗೂ ಸಮಸ್ಯೆ ಆಗಬಹುದು.
ತೂಕ ಹೆಚ್ಚಾಗುವ ಸಾಧ್ಯತೆ : ನೀವು ಸ್ಥೂಲಕಾಯದ ಸಮಸ್ಯೆ ಇದ್ದರೆ ತಕ್ಷಣವೇ ಈ ಬಿಳಿ ಅನ್ನ ಸೇವನೆಯನ್ನು ನಿಲ್ಲಿಸಿಬಿಡಿ. ಬಿಳಿ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಇದರ ಬದಲು ಬ್ರೌನ್ ರೈಸ್, ರೆಡ್ ರೈಸ್ ಸೇರಿದಂತೆ ಇತರ ಸೆಮಿ ಪಾಲಿಶ್ ಮಾಡಿದ ಅಕ್ಕಿಯಿಂದ ಅನ್ನ ಮಾಡಿ ಸೇವನೆ ಮಾಡಬಹುದು. ಬಿಳಿ ಅನ್ನ ಸೇವನೆಯಿಂದ ಸಕ್ಕರೆ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.