ಪ್ರತಿಯೊಬ್ಬರ ಮಲಗುವ ವಿಧಾನ ಬೇರೆ ಬೇರೆಯಾಗಿರುತ್ತದೆ. ಕೆಲವರು ಕತ್ತಲಲ್ಲಿ ಮಲಗಲು ಇಷ್ಟಪಡ್ತಾರೆ. ಮತ್ತೆ ಕೆಲವರು ಕತ್ತಲಿಗೆ ಹೆದರಿ ಸಣ್ಣ ಲೈಟ್ ಹಾಕಿ ರಾತ್ರಿ ಮಲಗ್ತಾರೆ. ಆದ್ರೆ ತಜ್ಞರ ಪ್ರಕಾರ ಕಗ್ಗತ್ತಲಲ್ಲಿ ಮಲಗಬೇಕಂತೆ. ಇದು ದೇಹ ಮತ್ತು ಮೆದುಳನ್ನು ಆರೋಗ್ಯವಾಗಿಡುತ್ತದೆಯಂತೆ. ರಾತ್ರಿ ಲೈಟ್ ಆರಿಸಿ ಮಲಗುವುದ್ರಿಂದ ಸಾಕಷ್ಟು ಲಾಭವಿದೆ.
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಅನೇಕ ರೀತಿಯ ದೀಪಗಳನ್ನು ಇಡುತ್ತಾರೆ. ಟೇಬಲ್ ಲ್ಯಾಂಪ್‌ಗಳು, ಹ್ಯಾಂಗಿಂಗ್ ಲ್ಯಾಂಪ್‌ಗಳು, ಹೋಲ್ಡರ್ ಬಲ್ಬ್‌ಗಳು ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಹೊರಸೂಸುವ ಕೃತಕ ದೀಪಗಳನ್ನು ರಾತ್ರಿ ಬಳಸಲಾಗುತ್ತದೆ. ಕೃತಕ ಬೆಳಕಿನಿಂದಾಗಿ ರಾತ್ರಿ ನಿದ್ರೆಗೆ ಅಡ್ಡಿಯಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ರಾತ್ರಿ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಕೆಲವು ಗಂಟೆಗಳ ಕಾಲ ಗಾಢ ನಿದ್ರೆ ಅಗತ್ಯ. ಕೋಣೆಯಲ್ಲಿ ಬೆಳಕಿದ್ದಾಗ ಮೆದುಳು ಮತ್ತು ದೇಹವು ಗಾಢ ನಿದ್ರೆಯ ಸ್ಥಿತಿಯನ್ನು ತಲುಪಲು ಸಾಧ್ಯವಿಲ್ಲ.
ನಿಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಮೆಲಟೋನಿನ್ ಹಾರ್ಮೋನ್ ಹೊರಗಿನ ಬೆಳಕನ್ನು ಆಧರಿಸಿ ರೂಪುಗೊಳ್ಳುತ್ತದೆ. ರಾತ್ರಿ ದೀಪದ ಬೆಳಕಿನಲ್ಲಿ ನೀವು ನಿದ್ರಿಸಿದರೆ, ನಿಮ್ಮ ದೇಹವು ಮೆಲಟೋನಿನ್ ಹಾರ್ಮೋನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೀವು ಹಗಲಿನಲ್ಲಿ ನಿದ್ರಿಸುತ್ತಿದ್ದೀರಿ ಎಂದು ಅದು ಭಾವಿಸುತ್ತದೆ.
ಕೆಲವರಿಗೆ ಲೈಟ್ ಆರಿಸಿದ್ರೆ ನಿದ್ರೆ ಬರುವುದಿಲ್ಲ. ಅಂತವರು ಮಲಗುವ ಮೊದಲು ಕಣ್ಣಿಗೆ ಬಟ್ಟೆ ಕಟ್ಟಿ ಮಲಗಬೇಕು.