
ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಪೋಷಕಾಂಶಗಳಲ್ಲಿ ವಿಟಮಿನ್ ಡಿ ಕೂಡ ಒಂದು. ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಹೀರಿಕೊಳ್ಳಲು ಮತ್ತು ಮೂಳೆಗಳನ್ನು ಬಲಪಡಿಸಲು ವಿಟಮಿನ್ ಡಿ ಬೇಕೇ ಬೇಕು. ಹಲ್ಲುಗಳನ್ನು ಸಹ ಇದು ಬಲಪಡಿಸುತ್ತದೆ. ನೀವು ಮಾಂಸಾಹಾರಿಯಾಗಿದ್ದರೆ ವಿಟಮಿನ್ ಡಿ ಇರುವಂತಹ ಸಾಕಷ್ಟು ಆಹಾರಗಳನ್ನು ಸೇವಿಸುತ್ತೀರಿ.
ಆದ್ರೆ ಸಸ್ಯಾಹಾರಿಗಳಿಗೆ ಕೆಲವೊಂದು ನಿರ್ದಿಷ್ಟ ಆಹಾರ ಪದಾರ್ಥಗಳಿಂದ ಮಾತ್ರ ವಿಟಮಿನ್ ಡಿ ಸಿಗುತ್ತದೆ. ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗದಂತೆ ಸಸ್ಯಾಹಾರಿಗಳು ಈ ಪದಾರ್ಥಗಳನ್ನು ಸೇವನೆ ಮಾಡಬೇಕು. ಇದರ ಜೊತೆಗೆ ಪ್ರತಿದಿನ ಅರ್ಧ ಗಂಟೆ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಹೀಗೆ ಮಾಡುವುದರಿಂದ ಮೂಳೆಗಳು ಗಟ್ಟಿಯಾಗಿರುತ್ತವೆ. ಸಸ್ಯಾಹಾರಿಗಳು ವಿಟಮಿನ್ ಡಿ ಕೊರತೆಯನ್ನು ನೀಗಿಸಿಕೊಳ್ಳಲು ಸೇವನೆ ಮಾಡಬೇಕಾದ ಆಹಾರ ಪದಾರ್ಥಗಳು ಯಾವುವು ಅನ್ನೋದನ್ನು ನೋಡೋಣ.
ಹಾಲು: ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಸಮೃದ್ಧವಾಗಿದೆ. ಅಲ್ಲದೆ ಹಾಲನ್ನು ಸಂಪೂರ್ಣ ಆಹಾರವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ರೀತಿಯ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದರಲ್ಲಿ ಪ್ರೋಟೀನ್ಗಳು ಕಂಡುಬರುತ್ತವೆ. ಹಾಗಾಗಿ ಹಾಲು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮೊಸರು: ಹಾಲಿನಿಂದ ತಯಾರಿಸಿದ ಮೊಸರು ಬೇಸಿಗೆಯಲ್ಲಿ ಸೇವನೆ ಮಾಡಬಹುದಾದ ಅತ್ಯುತ್ತಮ ಆಹಾರ ಪದಾರ್ಥ. ಮೊಸರಿನ ಸೇವನೆಯು ನಿಮ್ಮ ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಜೊತೆಗೆ ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಡೈರಿ ಉತ್ಪನ್ನಗಳ ಸೇವನೆಯಿಂದ ಅಲರ್ಜಿ ಇರುವವರಿಗೆ ಮೊಸರು ಪರಿಪೂರ್ಣ ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಸಾಕಷ್ಟು ಪ್ರೊಟೀನ್ ಮತ್ತು ಕ್ಯಾಲೋರಿಗಳು ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದು.
ಅಣಬೆ: ಅಣಬೆಗಳು ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ನೀವು ಅದನ್ನು ಸೂಪ್ ಅಥವಾ ಸಲಾಡ್ ರೂಪದಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅಣಬೆ ಸೇವನೆಯಿಂದ ದೇಹದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆಯಾಗುವುದಿಲ್ಲ.
ಕಿತ್ತಳೆ ರಸ: ವಿಟಮಿನ್ ಡಿ ಕಿತ್ತಳೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಒಂದು ಲೋಟ ಕಿತ್ತಳೆ ರಸವನ್ನು ಕುಡಿಯುವುದರಿಂದ, ನಿಮ್ಮ ದೇಹದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಕೊರತೆ ಇರುವುದಿಲ್ಲ.