ಶೀಘ್ರದಲ್ಲೇ ದೇಶದಲ್ಲಿ ಡಿಜಿಟಲ್ ಪಾವತಿಯ ವಿಧಾನ ಬದಲಾಗಲಿದೆ. ಆನ್‌ಲೈನ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು, ರಿಸರ್ವ್ ಬ್ಯಾಂಕ್, ಕಾರ್ಡ್ ಟೋಕನೈಸೇಶನ್ ಜಾರಿಗೆ ತರಲಿದೆ. ಇದರ ಮಾರ್ಗಸೂಚಿಗಳನ್ನು ರಿಸರ್ವ್ ಬ್ಯಾಂಕ್ ಜನವರಿ 8, 2019ರಂದೇ ಬಿಡುಗಡೆ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಿದೆ. ಪಾವತಿ ಮಾಡುವಾಗ ಅನೇಕರು ಸಿವಿವಿ ಸಂಖ್ಯೆಯನ್ನು ಮಾತ್ರ ನಮೂದಿಸುತ್ತಾರೆ. ಅಂದ್ರೆ ಇ-ಕಾಮರ್ಸ್ ವೆಬ್‌ಸೈಟ್ ಈಗಾಗಲೇ ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ. ಹಾಗಾಗಿ ಗ್ರಾಹಕರು ಸಿವಿವಿ ಮಾತ್ರ ನಮೂದಿಸುತ್ತಾರೆ. ಆದರೆ ಇನ್ಮುಂದೆ ಇ-ಕಾಮರ್ಸ್ ವೆಬ್‌ಸೈಟ್‌ಗಳು ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಟೋಕನ್ ಸಿಸ್ಟಮ್ ಮೂಲಕ ಪಾವತಿ ಮಾಡಬೇಕಾಗುತ್ತದೆ.
ಕಾರ್ಡ್ ಟೋಕನೈಸೇಶನ್‌ನಲ್ಲಿ ಕಾರ್ಡ್ ವಿವರಗಳನ್ನು ನಮೂದಿಸುವ ಅಗತ್ಯವಿಲ್ಲ. ಬದಲಾಗಿ ಒಂದು ಸಂಖ್ಯೆಯನ್ನು ನಿಮಗೆ ನೀಡಲಾಗುತ್ತದೆ. ಅದಕ್ಕೆ ಟೋಕನ್ ಎಂದು ಕರೆಯಲಾಗುತ್ತದೆ. ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ಸೇರಿದಂತೆ ಯಾವುದೇ ಇ-ಕಾಮರ್ಸ್ ವೆಬ್ಸೈಟ್ ನಲ್ಲಿ ಶಾಪಿಂಗ್ ಮಾಡಿದ ನಂತ್ರ 16 ಅಂಕಿಯ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಾಗಿಲ್ಲ. ಬದಲಾಗಿ ಟೋಕನ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಈ ನಿಯಮಗಳು ಜನವರಿ 1, 2022 ರಿಂದ ಜಾರಿಗೆ ಬರಲಿದೆ.