ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಕುರಿತು ಮಾಜಿ ಸಚಿವ ಆರಗ ಜ್ಞಾನೇಂದ್ರ ಅವಹೇಳನಕಾರಿ ಹೇಳಿಕೆ ನೀಡಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಕರ್ನಾಟಕದ ಜನರ ಬಗ್ಗೆ, ಖರ್ಗೆ ಮತ್ತು ಖಂಡ್ರೆ ಅವರ ಮೈಬಣ್ಣ ಹಂಗಿಸುವ ರೀತಿಯಲ್ಲಿ ಆರಗ ಜ್ಞಾನೇಂದ್ರ ಮಾತನಾಡಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅರಗ ಜ್ಞಾನೇಂದ್ರ ಅರಣ್ಯದ ಬಗ್ಗೆ ಮಾಹಿತಿ ಇಲ್ಲದ ಉತ್ತರ ಕರ್ನಾಟಕದವರು ಗೃಹ ಸಚಿವರಾಗುತ್ತಿರುವುದು ನಮ್ಮ ದುರ್ದೈವ. ಮರ-ಗಿಡ ಏನೆಂದು ಅವರಿಗೆ ಗೊತ್ತಿಲ್ಲ. ಸುಟ್ಟು ಕರಕಲಾಗಿರುವ ಮನುಷ್ಯರ ಮುಖ ನೋಡಿದರೆ ಗೊತ್ತಾಗುತ್ತದೆ. ಅವರಿಗೆ ತಲೆ ಕೂದಲು ಇರುವುದರಿಂದ ಸ್ವಲ್ಪ ಪರವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಆರಗ ಜ್ಞಾನೇಂದ್ರ ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಣ್ಣದ ಆಧಾರದಲ್ಲಿ ಅವಮಾನ ಮಾಡಿರುವ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಪಕ್ಷದ ಮನುವಾದದಲ್ಲಿನ ವರ್ಣಾಶ್ರಮದ ಬಗೆಗಿನ ಪ್ರೀತಿ ಮತ್ತು ದಮನಿತರ ವಿರುದ್ಧದ ಮನಸ್ಥಿತಿಯನ್ನು ಜ್ಞಾನೇಂದ್ರ ತೆರೆದಿಟ್ಟಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಆರಗ ಜ್ಞಾನೇಂದ್ರ ಅವರಿಗೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕಿದೆ ಎಂದು ಹೇಳಿದ್ದಾರೆ.
ವರ್ಣದ ಆಧಾರದಲ್ಲಿ ಅವಮಾನಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಅವರು ತಕ್ಷಣ ಕ್ಷಮೆ ಕೇಳಬೇಕು ಎಂದು ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ.ಹೆಚ್.ಟಿ. ಪೋತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ರಾಜೀವ್ ಜಾನೆ ಎಂಬುವರು ಕಲಬುರಗಿ ಅಶೋಕನಗರ ಪೊಲೀಸ್ ಠಾಣೆಗೆ ಆರಗ ಜ್ಞಾನೇಂದ್ರ ವಿರುದ್ಧ ದೂರು ನೀಡಿದ್ದಾರೆ. ಮೈಬಣ್ಣದ ಬಗ್ಗೆ ಮಾತನಾಡುವ ಮೂಲಕ ಅವಹೇಳನ ಮಾಡಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.