ಶಿವಮೊಗ್ಗ: ಕೆಇಎ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಅನೇಕ ಬಾರಿ ಹೇಳಿಕೆ ಕೊಟ್ಟಿದ್ದಾರೆ. ಪಿಎಸ್ಐ ಹಗರಣದಲ್ಲಿ ಕೂಡ ಪಾಟೀಲ್ ಸಿಕ್ಕಾಕೊಂಡಿದ್ದ. ನಮ್ಮ ಪೊಲೀಸರು ಕೊರಳಪಟ್ಟಿ ಹಿಡಿದು ಎಳೆದುಕೊಂಡು ಬಂದು ಜೈಲಲ್ಲಿ ತುಂಬಿದ್ರು ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ದೊಡ್ಡ ಪ್ರಕರಣದಲ್ಲಿ ಜೈಲಿನಿಂದ ಹೊರಬರಲಿಕ್ಕೆ ಆರ್.ಡಿ. ಪಾಟೀಲ್ ಯಾರ ಪ್ರಬಾವ ಬಳಿಸಿದ್ದ ಅನ್ನೊದನ್ನಾ ಪ್ರಿಯಾಂಕ್ ಖರ್ಗೆ ಹೇಳಬೇಕು. ವಿಧಾನಸಭೆಯಲ್ಲಿ ಆರ್.ಡಿ. ಪಾಟೀಲ್ ಗೂ ಕಾಂಗ್ರೆಸ್ ಗೂ ಸಂಬಂಧ ಇಲ್ಲ ಅಂತ ಪ್ರಿಯಾಂಕ್ ಖರ್ಗೆ ಅವರು ಸುಳ್ಳು ಹೇಳಿದ್ದಾರೆ ಎಂದರು.
ನಮ್ಮ ಬಳಿ ದಾಖಲಾತಿ ಇದೆ ಅಂತ ತಿಳಿದಿದೆ. ಆರ್.ಡಿ. ಪಾಟೀಲ್ ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟು ತಾ. ಪಂ. ಸ್ಪರ್ಧೆ ಮಾಡಲು ಬಿ ಫಾರಂ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಅವರ ಜೊತೆ ಇರುವ ಆತ್ಮ ಸಖಾ ಆತ. ಪಿಎಸ್ಐ ಹಗರಣದಲ್ಲಿ ಅವನನ್ನು ಹಿಡಿದಾಗ ನನ್ನ ರಾಜೀನಾಮೆ ಕೇಳಿದ್ದರು. ಈಗ ನೀವು ರಾಜೀನಾಮೆ ಕೊಡಿ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲೇ ಯಾಕೇ ಪರೀಕ್ಷಾ ಅಕ್ರಮ ನಡೆಯುತ್ತೆ. ವಿಶೇಷವಾಗಿ ಬ್ಲೂಟೂತ್ ಬಳಸಿ ಅಕ್ರಮ ನಡೆಸಿದ್ದಾರೆ. ಕೆಇಎ ಪರೀಕ್ಷೆಯಲ್ಲಿ ಆರ್.ಡಿ. ಪಾಟೀಲ್ ಆರೋಪಿ ಅಂದ ತಕ್ಷಣ. ಜಾಮೀನು ತಿರಸ್ಕಾರ ಆಗುವವರೆಗೂ ಆತ ಎಲ್ಲಿದ್ದ. ಯಾಕೆ ಪೊಲೀಸರು ಬಂಧಿಸಿಲ್ಲ. ಅವರ ಮೇಲೆ ಯಾರ ಒತ್ತಡ ಇತ್ತು…? ಇದಕ್ಕೆ ಸಮಂಜಸವಾದ ಉತ್ತರವನ್ನು ರಾಜ್ಯದ ಜನರಿಗೆ ಪ್ರಿಯಾಂಕ್ ಖರ್ಗೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಬಗಲಲ್ಲೇ ಎಲ್ಲಾ ಅಪರಾಧಿಗಳನ್ನು ಇಟ್ಟುಕೊಂಡು ಊರಿಗೆ ಆಚಾರ ಹೇಳುವಂತಹ ಕೆಲಸ ಮಾಡಬಾರದು. ಈಗಲೂ ಕೂಡ ಆರ್.ಡಿ. ಪಾಟೀಲ್ ಕಾಂಪೌಂಡ್ ಹಾರಿ ಓಡಿ ಹೋಗಿದ್ದಾನೆ. ಇದಕ್ಕೆ ಸ್ಥಳೀಯ ಪೊಲೀಸರು ಸಹಕರಿಸಿದ್ದಾರೆ. ಯಾರು ಒತ್ತಡದಿಂದ ಪೊಲೀಸರು ಸಹಕರಿಸಿದರು. ಅವತ್ತು ಕೊರಳಪಟ್ಟಿ ಹಿಡಿದುಕೊಂಡು ಬಂದಂತ ಪೊಲೀಸರಿಗೆ ಈಗ ಅರೆಸ್ಟ್ ಮಾಡಬಾರದು ಅಂತ ಯಾಕ್ ಅನಿಸ್ತು. ಈ ರೀತಿ ಅಧಿಕಾರದಲ್ಲಿರುವಂತ ನಿಮ್ಮಂತವರು ಮಾತಾಡ್ತಾ ಹೋದ್ರೆ ಪೊಲೀಸರನ್ನು ಪ್ರಭಾವಿಸಿ ಅಪರಾಧಿಗಳನ್ನು ರಕ್ಷಣೆ ನೀಡುತ್ತಾ ಹೋದರೆ ನಾಳೆ ಏನಾಗುತ್ತೆ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥ ಮಾಡ್ಕೊಬೇಕು ಎಂದರು.
ಅಂದು ಶಾಸಕರಾಗಿದ್ದ ಪ್ರಿಯಾಂಕ್ ಖರ್ಗೆ ನನ್ನ ರಾಜೀನಾಮೆ ಕೇಳಿದ್ದರು. ಇವತ್ತು ನೀವೇನು ಹೇಳುತ್ತೀರಾ? ಕಲಬುರಗಿಯಲ್ಲಿ ಈ ಘಟನೆ ನಡೆದಿದೆ. ನಿಮ್ಮ ಅತ್ಯಂತ ಆಪ್ತ ಮನುಷ್ಯ ಅದ್ರಲ್ಲಿ ಭಾಗವಹಿಸಿದ್ದಾನೆ. ಪಿಎಸ್ಐ ಹಗರಣದಲ್ಲೂ ಆತನೇ ಇದ್ದ. ರಾಜ್ಯದ ಜನ ನಿಮ್ಮ ಕಡೆ ಬೆರಳು ತೋರಿಸುವ ಹಾಗೆ ಆಗಿದೆ. ದಯವಿಟ್ಟು ಸ್ಪಷ್ಟನೆ ಕೊಡಿ. ನೀವು ಈ ರೀತಿ ಅಧಿಕಾರದಲ್ಲಿ ಹೇಗೆ ಮುಂದುವರೆಯುತ್ತೀರಿ ಎಂದು ಜನಕ್ಕೆ ಹೇಳಬೇಕು. ಈ ರೀತಿ ಅಪರಾಧಿಗಳನ್ನು ರಕ್ಷಣೆ ಮಾಡುವಂತಹ ಕೆಲಸ ಕೈ ಬಿಡಬೇಕು. ಇಲ್ಲವಾದರೆ ಅರಾಜಕತೆಗೆ ಒಳಗಾಗುತ್ತೆ. ಯಾವ ಪರೀಕ್ಷೆಗಳು ಸರಿಯಾಗಿ ನಡೆಯುವುದಿಲ್ಲ. ರಾಜ್ಯದ ಜನ ಸಹ ಇವರೆಲ್ಲ ಏನ್ ಹೇಳ್ತಾರೆ ಅನ್ನೋದನ್ನ ಗಮನಿಸಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.