![](https://kannadadunia.com/wp-content/uploads/2021/12/araga-jnanendra-dh-1033315-1632357995-1057160-1638523028.jpg)
ಚಿಕ್ಕಮಗಳೂರು: ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಶೃಂಗೇರಿಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕರ್ನಾಟಕದ ಪೊಲೀಸರಿಗೆ ದೇಶದಲ್ಲಿಯೇ ಗೌರವವಿದೆ. ಇಂತಹ ಇಲಾಖೆ ಗೌರವವನ್ನು ಆರಗ ಜ್ಞಾನೇಂದ್ರ ಹೆಚ್ಚಿಸುತ್ತಾರೆ ಎಂದುಕೊಂಡಿದ್ದೆವು. ಆದರೆ, ಅವರು ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಗೃಹ ಸಚಿವರು ಪೊಲೀಸ್ ಇಲಾಖೆಯನ್ನು ನಿಂದಿಸಿರುವುದು ಖಂಡನೀಯವಾಗಿದೆ. ಪೊಲೀಸರು ಹಗಲಿರುಳು ಕೆಲಸ ಮಾಡುವ ಮೂಲಕ ಶಾಂತಿ-ಸುವ್ಯವಸ್ಥೆ ಕಾಪಾಡುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಮಹಿಳೆಯರು ರಾತ್ರಿ ವೇಳೆ ಕೆಲಸ ಮಾಡಿ ದುಡಿದು ಗೌರವಯುತವಾಗಿ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ರಾಜ್ಯದ ಪೊಲೀಸರು ಕಾರಣ. ಅವರ ನೈತಿಕತೆ ಕುಗ್ಗಿಸುವಂತಹ ಹೇಳಿಕೆ ಸರಿಯಲ್ಲ ಎಂದು ಹೇಳಲಾಗಿದೆ.
ಇಲಾಖೆಯ ಸಚಿವರಾದ ಆರಗ ಜ್ಞಾನೇಂದ್ರ ಅವರು ಪೋಲಿಸರನ್ನು ಪ್ರಾಣಿಗಳಿಗೆ ಹೋಲಿಸಿರುವುದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ನೀಡಲಾಗಿದೆ.