ಕಲ್ಬುರ್ಗಿ: ಸೂಕ್ತವಾದ ತನಿಖೆ ನಡೆದಲ್ಲಿ ಯುವ ಕಾಂಗ್ರೆಸ್ ಚುನಾವಣೆಯಲ್ಲಿನ ಹ್ಯಾಕಿಂಗ್ ಮಾಹಿತಿ ಹೊರಬರಲಿದೆ. ಈ ಬಗ್ಗೆ ತನಿಖೆ ನಡೆದರೆ ಆನ್ಲೈನ್ ಚುನಾವಣೆಯ ಹ್ಯಾಕಿಂಗ್ ಮಾಹಿತಿ ಗೊತ್ತಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಲ್ಬುರ್ಗಿಯಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹ್ಯಾಂಕಿಂಗ್ ನಡೆದ ಬಗ್ಗೆ ತನಿಖೆ ನಡೆಸಲು ಬರುತ್ತದೆಯೇ ಎಂದು ಕಾಂಗ್ರೆಸ್ ನವರು ಕೇಳಿದ್ದರು. ಆದರೆ, ಈ ವಿಚಾರ ರಾಜಕೀಯ ಪಕ್ಷಕ್ಕೆ ಸಂಬಂಧಿಸಿರುವುದರಿಂದ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಪಕ್ಷದ ಅಧ್ಯಕ್ಷರು ತನಿಖೆಗೆ ಪತ್ರ ಬರೆದರೆ ಪೊಲೀಸರು ತನಿಖೆ ಕೈಗೊಳ್ಳಬಹುದು ಎಂದು ಹೇಳಿ ಕಳುಹಿಸಿದ್ದಾಗಿ ತಿಳಿಸಿದರು.
ಆನ್ಲೈನ್ ನಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆ ಹ್ಯಾಕಿಂಗ್ ಆಗಿದೆ. ಆನ್ಲೈನ್ ಮತಗಳು ಒಬ್ಬರಿಗೆ ಹೋಗಿವೆ. ಇದನ್ನು ಪ್ರತಿಸ್ಪರ್ಧಿ ಪ್ರಶ್ನಿಸಿದಾಗ ಕೆಪಿಸಿಸಿ ಅಧ್ಯಕ್ಷರು ಕಡಿಮೆ ಮತ ಪಡೆದವರಿಗೆ ಅಧ್ಯಕ್ಷ ಸ್ಥಾನಕ್ಕೆ ನೀಡಿ, ಹೆಚ್ಚು ಮತ ಪಡೆದವರಿಗೆ ಮುಂದಿನ ಅಧ್ಯಕ್ಷರನ್ನಾಗಿ ನೇಮಕ ಮಾಡುವುದಾಗಿ ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.