ಶಿವಮೊಗ್ಗ: ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರನ್ನು ತಮ್ಮ ಎಸ್ಕಾರ್ಟ್ ವಾಹನದಲ್ಲಿಯೇ ಆಸ್ಪತ್ರೆಗೆ ಕಳುಹಿಸುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಂಡಗದ್ದೆ ಬಳಿ ನಡೆದ ಅಪಘಾತದಲ್ಲಿ ಬೈಕ್ ಸವಾರರಾದ ಜೇಡಿಕುಣಿ ಗ್ರಾಮದ ಸುಬ್ರಹ್ಮಣ್ಯ ಮತ್ತು ಸಂಪತ್ ಗಾಯಗೊಂಡಿದ್ದಾರೆ. ಇದೇ ಮಾರ್ಗವಾಗಿ ಶಿವಮೊಗ್ಗಕ್ಕೆ ತೆರಳುತ್ತಿದ್ದ ಆರಗ ಜ್ಞಾನೇಂದ್ರ ಅವರು ತಮ್ಮ ಬೆಂಗಾವಲು ಸಿಬ್ಬಂದಿಗೆ ಸೂಚನೆ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಬೈಕ್ ಸವಾರರು ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಆರಗ ಜ್ಞಾನೇಂದ್ರ ವಾಹನ ನಿಲ್ಲಿಸಲು ಸೂಚಿಸಿದ್ದಾರೆ. ವಾಹನ ಇಳಿದು ಗಾಯಾಳುಗಳಿಗೆ ನೀರು ಕುಡಿಸಿ ಧೈರ್ಯ ತುಂಬಿದ್ದಾರೆ. ನೆಟ್ವರ್ಕ್ ಇಲ್ಲದ ಕಾರಣ ಆಂಬುಲೆನ್ಸ್ ಗೆ ಕರೆ ಮಾಡಲು ಸಾಧ್ಯವಾಗಿಲ್ಲ. ಆಗ ಎಸ್ಕಾರ್ಟ್ ಸಿಬ್ಬಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸೂಚನೆ ನೀಡಿದ್ದಾರೆ. ಗೃಹ ಸಚಿವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.