
ಶಿವಮೊಗ್ಗ: ರೌಡಿಸಂ, ಮಾದಕ ವಸ್ತು ಮಾರಾಟ, ಖಾಲಿ ನಿವೇಶನ ಬಗ್ಗೆಯೂ ಘರ್ಷಣೆ ನಡೆಯುತ್ತಿದ್ದು, ಇದನ್ನು ಮಟ್ಟ ಹಾಕಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಆರೋಪ ಇರುವುದರಿಂದ ಶಿಕ್ಷೆ ಪ್ರಮಾಣ ಹೆಚ್ಚು ಮಾಡಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಮುಖ ಪ್ರಕರಣಗಳಲ್ಲಿಯೂ ಚಾರ್ಜ್ ಶೀಟ್ ಹಾಕುತ್ತಿಲ್ಲ. ಸರಕಾರಿ ವಕೀಲರಿಂದ ಕೇಸಿನ ಫಾಲೋಅಪ್ ಇಲ್ಲ. ಇದರ ಬಗ್ಗೆಯೂ ಗಮನ ಹರಿಸುವಂತೆ ಸೂಚಿಸಲಾಗಿದೆ ಎಂದ ಅವರು ಸೈಬರ್ ಕ್ರೈಂ ನಿಯಂತ್ರಣಕ್ಕೆ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇನ್ಫೋಸಿಸ್ ನೆರವಿನಿಂದ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಕಂದಾಯ ಭೂಮಿಯಲ್ಲಿನ ಕಲ್ಲು ಕ್ವಾರಿಗಳನ್ನು ಆದಷ್ಟು ಬೇಗ ಕಾರ್ಯಾರಂಭ ಮಾಡಲು ಸೂಚಿಸಲಾಗಿದೆ. ಮರಳು, ಜಲ್ಲಿ ಕ್ವಾರಿಗಳು, 94 ಸಿ ಬಗ್ಗೆ ವಿಸ್ತøತವಾಗಿ ಚರ್ಚೆ ಮಾಡಲಾಗಿದೆ. ಜಿಲ್ಲೆಯ ಅಭಿವೃದ್ಧಿ ಯೋಜನೆಗಳಿಗೆ ಜಲ್ಲಿ, ಕಲ್ಲು, ಮರಳು ಅಗತ್ಯವಾಗಿ ಬೇಕಿರುವುದರಿಂದ ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿರುವ ಕ್ವಾರಿಗಳನ್ನು ಆದಷ್ಟು ಬೇಗ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಶಿವಮೊಗ್ಗದಲ್ಲಿ ಕಮೀಷನರೇಟ್ ಕಚೇರಿ ಸ್ಥಾಪನೆ ಸಂಬಂಧ ಕಾನೂನು ತೊಡಕಿದೆ. ಜನಸಂಖ್ಯೆ ಸೇರಿದಂತೆ ಇತರೆ ಅಂಶಗಳನ್ನು ಪರಿಗಣಿಸಬೇಕಿದೆ. ಶಿವಮೊಗ್ಗ, ಭದ್ರಾವತಿ ನಗರಗಳನ್ನೊಳಗೊಂಡು ಕಮೀಷನರೇಟ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಅಫ್ಘನ್‍ನಲ್ಲಿರುವ ಕನ್ನಡಿಗರನ್ನು ಕರೆ ತರಲು ಯತ್ನ ನಡೆಸಲಾಗಿದೆ. ಇದಕ್ಕಾಗಿ ಎಡಿಜಿಪಿ ದರ್ಜೆಯ ಹಿರಿಯ ಅಧಿಕಾರಿ ಉಮೇಶ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದರು.