ಶಿವಮೊಗ್ಗ: ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ತಾರಿಕ್ ನಾಲ್ವರು ಸಂಬಂಧಿಕರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ತಾರೀಕ್ ಗೆ ಸಂಬಂಧಿಸಿದ ಕೆಲವು ವಸ್ತುಗಳು ದೊರೆತಿವೆ ಎಂದು ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಹಿಂದಿನ ಸರ್ಕಾರಗಳು ಎಫ್ಐಆರ್ ದಾಖಲಿಸಿ ಸುಮ್ಮನಾಗುತ್ತಿದ್ದವು. ಮೋದಿ ಸರ್ಕಾರ ಬಂದ ನಂತರ ಉಗ್ರರ ಜನ್ಮ ಜಾಲಾಡುತ್ತಿದೆ. ಉಗ್ರ ಚಟುವಟಿಕೆ, ಸಂಘಟನೆ, ಹಣ ವರ್ಗಾವಣೆ ಬಗ್ಗೆ ತನಿಖೆ ಆಗುತ್ತಿದೆ ಎಂದರು.
ಉಗ್ರ ಸಂಘಟನೆಗಳಿಗೆ ಕರಾವಳಿ, ಮಲೆನಾಡಿನೊಂದಿಗೆ ದೊಡ್ಡ ಲಿಂಕ್ ಇದ್ದು, ಉಗ್ರ ಚಟುವಟಿಕೆ ಮತ್ತು ಚಲನವಲನದ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ. ತೀರ್ಥಹಳ್ಳಿಗೆ ಕರಾವಳಿ, ಕೇರಳ ಮತೀಯ ಸಂಘಟನೆಗಳ ಲಿಂಕ್ ಇದೆ. ಕರಾವಳಿಯಿಂದ ಮೇಲೆ ಬಂದರೆ ಮೊದಲೇ ಸಿಗುವುದೇ ತೀರ್ಥಹಳ್ಳಿ. ಹಾಗಾಗಿ ಒಂದಷ್ಟು ಯುವಕರು ಉಗ್ರ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
ಗೃಹ ಸಚಿವರು, ಉಗ್ರರು ತೀರ್ಥಹಳ್ಳಿಯವರು ಎಂಬುದು ದುರಂತ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರುವ ಸಾಕಷ್ಟು ಜನರು ಇದ್ದಾರೆ. ನಮ್ಮ ಸರ್ಕಾರ ಅಂತವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.