ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹಾಲು, ತುಪ್ಪ ಕಾರ್ಯಕ್ರಮ ಮುಗಿಯುವವರೆಗೂ ಅಭಿಮಾನಿಗಳಿಗೆ ಸಮಾಧಿ ಸ್ಥಳಕ್ಕೆ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸ್ಟುಡಿಯೋ ಒಳಗೆ ಬಿಡುವುದಿಲ್ಲ ಎಂದು ಹೇಳಿ ಅವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಹೀಗಿದ್ದರೂ, ಕೂಡ ಅಭಿಮಾನಿಗಳು ಸ್ಟುಡಿಯೋ ಬಳಿ ನೆರೆದಿದ್ದು, ಅಭಿಮಾನಿಗಳನ್ನು ಮನೆಗೆ ಕಳುಹಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ.
ಇನ್ನು ಸುಮಾರು 20 ಲಕ್ಷಕ್ಕೂ ಅಧಿಕ ಜನರು ಅಪ್ಪು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಗೃಹಸಚಿವ ಆರಗ ಜ್ಞಾನೇಂದ್ರ ವಿಧಾನಸೌಧದಲ್ಲಿ ಮಾತನಾಡಿ, ಇನ್ನು ಸುಮಾರು 20 ಲಕ್ಷಕ್ಕೂ ಅಧಿಕ ಜನರು ಅಪ್ಪು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದವರಿಗೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪೊಲೀಸರ ಶ್ರಮ ಬಹಳ ಇದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭದ್ರತೆಗೆ 20 ಸಾವಿರ ಪೊಲೀಸರು, ಬೇರೆ ಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಕೇಂದ್ರ ಪಡೆ, 50 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಹಗಲು-ರಾತ್ರಿಯೆನ್ನದೆ ಎಲ್ಲರೂ ನಿದ್ದೆಯನ್ನು ಬಿಟ್ಟು ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಸಚಿವರು ಜೊತೆಯಲ್ಲಿದ್ದು ಸಹಕಾರ ನೀಡಿದ್ದಾರೆ. ಅಭಿಮಾನಿಗಳು ಶಾಂತಿಯಿಂದ, ಶಿಸ್ತಿನಿಂದ ಸಹಕಾರ ನೀಡಿದ್ದಾರೆ. ರಾಜಕುಮಾರ್ ಕುಟುಂಬವು ಸರ್ಕಾರಕ್ಕೆ ಸಹಕಾರ ನೀಡಿದೆ. ಮಾಧ್ಯಮಗಳು ಕೂಡ ಉತ್ತಮ ಕೆಲಸ ಮಾಡಿವೆ. ಕೋಟಿಗಟ್ಟಲೆ ಜನ ಟಿವಿಯಲ್ಲಿ ವೀಕ್ಷಿಸಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದು ಗೃಹ ಸಚಿವರು ಹೇಳಿದ್ದಾರೆ.
ರಾಜಕುಮಾರ್ ನಿಧನರಾದಾಗ ಪರಿಸ್ಥಿತಿ ಯಾವ ರೀತಿ ಇತ್ತು ಎನ್ನುವುದು ಗೊತ್ತಿದೆ. ಆಗ ಆದ ಅನಾಹುತಗಳು ನೆನಪಿನಲ್ಲಿವೆ. ಆದರೆ, ನಟ ಪುನೀತ್ ರಾಜಕುಮಾರ್ ನಿಧನದ ವೇಳೆ ಪರಿಸ್ಥಿತಿ ನಿಭಾಯಿಸಿದ್ದೇವೆ. ಹಿರಿಯ ಅಧಿಕಾರಿಗಳು ಸರಿಯಾದ ವ್ಯವಸ್ಥೆಯನ್ನು ಮಾಡಿದ್ದರು. ಹಾಗಾಗಿ, ಎಲ್ಲವೂ ಸರಿಯಾಗಿ ನಡೆದಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.