ಬೆಂಗಳೂರು: ವಿರೋಧ ಪಕ್ಷಗಳ ವಿರೋಧ, ಸಭಾತ್ಯಾಗದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಅಂಗೀಕಾರಗೊಂಡಿದೆ. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿದೇಯಕ 2022 ವಿಧಾನ ಪರಿಷತ್ ನಲ್ಲಿ ಅಂಗೀಕಾರ ಪಡೆದುಕೊಂಡಿತ್ತು.
ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅನುಮೋದನೆ ಕೋರಿದ್ದು, ಈ ವೇಳೆ ಕಾಂಗ್ರೆಸ್ ಸದಸ್ಯರಾದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಕೃಷ್ಣಭೈರೇಗೌಡ, ಶಿವಾನಂದ ಪಾಟೀಲ್ ಸೇರಿದಂತೆ ಹಲವರು, ಇದು ಕಾನೂನುಬಾಹಿರವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ದೂರಿದರು.
ಸ್ವಇಚ್ಛೆ ಮತಾಂತರಕ್ಕೆ ಅಡ್ಡಿಯಿಲ್ಲ. ಬಲವಂತದ ಮತಾಂತರಕ್ಕೆ ಮಾತ್ರ ನಿರ್ಬಂಧವಿದೆ. ಈ ವಿಧೇಯಕದಲ್ಲಿ ದುರುದ್ದೇಶ, ದುರುಪಯೋಗಕ್ಕೆ ಅವಕಾಶಗಳಿಲ್ಲ. ಸ್ವಇಚ್ಛೆಯಿಂದ ಮತಾಂತರಗೊಳ್ಳುವ ಸ್ವಾತಂತ್ರ್ಯ ಹಕ್ಕು ಇದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು. ಸರ್ಕಾರದ ಉತ್ತರಕ್ಕೆ ಸಮಾಧಾನಗೊಳ್ಳದ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದು, ಇದರ ನಡುವೆ ವಿಧೇಯಕ್ಕೆ ಅಂಗೀಕಾರ ದೊರೆತಿದೆ.