ಬೆಂಗಳೂರು: ಪಿಎಸ್ಐ ನೇಮಕಾತಿ ಮರು ಪರೀಕ್ಷೆ ನಡೆಸುವ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭ್ಯರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಜಯಮಹಲ್ ನಲ್ಲಿರುವ ಗೃಹ ಸಚಿವರ ಸರ್ಕಾರಿ ನಿವಾಸದಲ್ಲಿ ಅಭ್ಯರ್ಥಿಗಳು ಭೇಟಿ ಮಾಡಿದ ವೇಳೆ ಸಚಿವರು, ಮರು ಪರೀಕ್ಷೆ ನಡೆಸುವುದು ತಡವಾದರೆ ವಯೋಮಿತಿ ಮೀರುವ ಅಭ್ಯರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಆತಂಕ ಬೇಡ. ಮರು ಪರೀಕ್ಷೆ ನಡೆಸಲು ಸರ್ಕಾರ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
56 ಸಾವಿರ ಅಭ್ಯರ್ಥಿಗಳ ಪೈಕಿ ಅಕ್ರಮದಲ್ಲಿ ಭಾಗಿಯಾಗಿದ್ದವರು ಬಿಟ್ಟು ಉಳಿದ ಎಲ್ಲಾ ಅಭ್ಯರ್ಥಿಗಳು ಪಿಎಸ್ಐ ಮರು ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಈ ಬಗ್ಗೆ ಆತಂಕ ಬೇಡವೆಂದು ಅಭ್ಯರ್ಥಿಗಳಿಗೆ ಸಚಿವರು ಭರವಸೆ ನೀಡಿದ್ದಾರೆ. 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು.