ಮಂಗಳೂರು: ಕರಾವಳಿಯಲ್ಲಿ ನಡೆದ ಶರತ್ ಮಡಿವಾಳ ಮತ್ತು ಪ್ರವೀಣ್ ನೆಟ್ಟಾರು ಕೊಲೆಗೆ ಸಾಕಷ್ಟು ಸಾಮ್ಯತೆ ಇದೆ. ಬಂಟ್ವಾಳದ ಕೋಮುದಳ್ಳುರಿಯಿಂದ ಶರತ್ ಮಡಿವಾಳ ಹತ್ಯೆಯಾಗಿದ್ದರು.
ಅಂಗಡಿ ಮುಚ್ಚುವಾಗ ಶರತ್ ಕೊಲೆ ಮಾಡಲಾಗಿತ್ತು. ಅದೇ ರೀತಿ ನಿನ್ನೆ ಕೋಳಿ ಅಂಗಡಿ ಬಂದ್ ಮಾಡುವಾಗ ಪ್ರವೀಣ್ ನೆಟ್ಟಾರು ಹತ್ಯೆ ಮಾಡಲಾಗಿದೆ.
ಬಿ.ಸಿ. ರೋಡ್ ಉದಯ ಲಾಂಡ್ರಿಯಲ್ಲಿ ಕೆಲಸ ಮುಗಿಸಿ ಅಂಗಡಿ ಬಾಗಿಲು ಹಾಕುತ್ತಿದ್ದ ವೇಳೆಯಲ್ಲಿ ಶರತ್ ಮಡಿವಾಳ ಅವರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಹತ್ಯೆಗೈದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಶರತ್ ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಶರತ್ ಹತ್ಯೆಯ ನಂತರ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.
ಅದೇ ರೀತಿಯಲ್ಲಿ ಪ್ರವೀಣ್ ಹತ್ಯೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ 5 ವಿಶೇಷ ಪೊಲೀಸರ ತಂಡ ರಚಿಸಲಾಗಿದೆ. ಕೇರಳ, ಮಡಿಕೇರಿ, ಹಾಸನ ಭಾಗಗಳಿಗೆ ಮೂರು ತಂಡಗಳು ತೆರಳಿವೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡಿಸಿದ್ದಾರೆ. ಅಂಗಡಿ ಮುಚ್ಚುವಾಗ ಅಮಾಯಕ ಯುವಕನ ಕೊಲೆ ಮಾಡಲಾಗಿದೆ. ಸೈದ್ಧಾಂತಿಕವಾಗಿ ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೆ, ಕೊಲೆಯಂತಹ ಕೃತ್ಯಗಳು ನಡೆಯಬಾರದು. ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿಯಲ್ಲಿ ಪದೇಪದೇ ಇಂತಹ ಘಟನೆಗಳು ನಡೆಯುತ್ತಿದ್ದು, ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಕಾಪಾಡುವಂತೆ ಅಲ್ಲಿನ ಜನರಿಗೆ ಮನವಿ ಮಾಡುತ್ತೇನೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.