ದೇಶಾದ್ಯಂತ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ವಿಚಾರದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಗಳು ಸಹ ಈ ವಿಚಾರವಾಗಿ ಆಗಾಗ ಸುದ್ದಿಯಾಗುತ್ತಿದ್ದಾರೆ.
ವಿಕಟನ್ ಸಿನೆಮಾ ಸಮಾರಂಭದಲ್ಲಿ ಗೌರವಿಸಲ್ಪಟ್ಟ ವೇಳೆ, ವೇದಿಕೆ ಮೇಲೆ ಮಾತನಾಡಲು ಬಂದ ತಮ್ಮ ಮಡದಿಗೆ ಹಿಂದಿ ಬದಲಿಗೆ ತಮಿಳಿನಲ್ಲಿ ಮಾತನಾಡಲು ಸಂಗೀತ ನಿರ್ಮಾಪಕ ಎ ಆರ್ ರೆಹಮಾನ್ ಸೂಚಿಸಿದ್ದಾರೆ. ತಮಗೆ ನೀಡುತ್ತಿದ್ದ ಪ್ರಶಸ್ತಿಯನ್ನು ತಮ್ಮೊಂದಿಗೆ ಸ್ವೀಕರಿಸುವ ವೇಳೆ ಮಡದಿ ಸಾಯ್ರಾ ಬಾನುಗೆ ತಮಿಳಿನಲ್ಲಿ ಮಾತನಾಡಲು ಸೂಚಿಸಿದ್ದಾರೆ ರೆಹಮಾನ್.
ತಮ್ಮ ಪತಿ ಹೀಗೆ ಹೇಳುತ್ತಲೇ ಇದಕ್ಕೆ ವೇದಿಕೆ ಮೇಲಿಂದಲೇ ಪ್ರತಿಕ್ರಿಯಿಸಿದ ಸಾಯ್ರಾ, “ಕ್ಷಮಿಸಿ, ನನಗೆ ತಮಿಳಿನಲ್ಲಿ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ. ಹಾಗಾಗಿ, ದಯವಿಟ್ಟು ನನ್ನನ್ನು ಕ್ಷಮಿಸಿ. ಅವರ ದನಿ ನನ್ನ ಅಚ್ಚುಮೆಚ್ಚಾದ ಕಾರಣ ನನಗೆ ಬಹಳ ಖುಷಿಯಾಗಿದೆ. ನಾನು ಅವರ ದನಿಗೆ ಮರುಳಾಗಿ ಅವರನ್ನು ಪ್ರೇಮಿಸಿದೆ. ನಾನು ಇಷ್ಟು ಮಾತ್ರ ಹೇಳಬಲ್ಲೆ,” ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದಾರೆ.
ಬೇರೆ ಬೇರೆ ರಾಜ್ಯಗಳ ಜನರು ಪರಸ್ಪರ ಸಂಭಾಷಣೆ ಮಾಡುವ ವೇಳೆ ಇಂಗ್ಲಿಷ್ ಬದಲಿಗೆ ಹಿಂದಿಯಲ್ಲಿ ಮಾತನಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ರೆಹಮಾನ್, ತಮಿಳು ರಾಷ್ಟ್ರಗೀತೆಯನ್ನು ಶೇರ್ ಮಾಡುವ ಮೂಲಕ ತಮಿಳು ಭಾಷೆಯ ಮೇಲಿನ ತಮ್ಮ ಅದಮ್ಯ ಪ್ರೀತಿ ವ್ಯಕ್ತಪಡಿಸಿದ್ದರು.