ಭಾರತೀಯ ಚಿತ್ರರಂಗದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ವಿರುದ್ಧ 10 ಕೋಟಿ ರೂಪಾಯಿ ಪರಿಹಾರ ಕೇಳಿ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ.
2018 ರಲ್ಲಿ ಸಂಗೀತ ಕಾರ್ಯಕ್ರಮಕ್ಕಾಗಿ ಎ.ಆರ್. ರೆಹಮಾನ್ ಅವರಿಗೆ ಮುಂಗಡವಾಗಿ 29 ಲಕ್ಷ ರೂಪಾಯಿ ನೀಡಿದ್ದೆವು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮ ಆಯೋಜಿಸಲಾಗಲಿಲ್ಲ. ಆದರೆ ಎ.ಆರ್. ರೆಹಮಾನ್ ಮುಂಗಡವಾಗಿ ಪಡೆದ ಹಣವನ್ನ ವಾಪಸ್ ನೀಡಿಲ್ಲ ಎಂದು ಭಾರತೀಯ ಶಸ್ತ್ರಚಿಕಿತ್ಸಕರ ಸಂಘ ಕಳೆದ ತಿಂಗಳು ದೂರು ನೀಡಿತ್ತು.
ಇದನ್ನು ಅಲ್ಲಗಳೆದಿರುವ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಇದು ಸುಳ್ಳು ಆರೋಪವೆಂದಿದ್ದು ತಮ್ಮ ಮಾನಹಾನಿ ಮಾಡಿದ್ದಕ್ಕಾಗಿ ಪರಿಹಾರವಾಗಿ 10 ಕೋಟಿ ಪರಿಹಾರ ನೀಡಬೇಕೆಂದು ತಮ್ಮ ವಕೀಲರ ಮೂಲಕ ಸಂಘಕ್ಕೆ ನೋಟಿಸ್ ಕಳುಹಿಸಿದ್ದಾರೆ.
ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ರೆಹಮಾನ್ ಇದರಲ್ಲಿ ಮೂರನೇ ವ್ಯಕ್ತಿ ಭಾಗಿಯಾಗಿದ್ದಾರೆಂದು ತಿಳಿಸಿದ್ದಾರೆ. ತಾವು ಮುಂಗಡ ಹಣ ಪಡೆದಿಲ್ಲ, ಹೀಗಾಗಿ ತಮ್ಮ ಪ್ರತಿಷ್ಠೆಗೆ ಧಕ್ಕೆ ತಂದಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಬೇಕು. ಮೂರು ದಿನದೊಳಗೆ ತಮ್ಮ ವಿರುದ್ಧದ ದೂರನ್ನು ವಾಪಸ್ ಪಡೆಯಬೇಕು. ಜೊತೆಗೆ ರೆಹಮಾನ್ ಮಾನಹಾನಿ ಮಾಡಿದ್ದಕ್ಕಾಗಿ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಭಾರತೀಯ ಶಸ್ತ್ರಚಿಕಿತ್ಸಕರ ಸಂಘವನ್ನು ಒತ್ತಾಯಿಸಿ ಪರ ವಕೀಲರು ನೋಟಿಸ್ ನೀಡಿದ್ದಾರೆ. ಸಂಘವು ಪರಿಹಾರವನ್ನು ಪಾವತಿಸಲು ವಿಫಲವಾದಲ್ಲಿ ಕಾನೂನು ಕ್ರಮ ಮುಂದುವರೆಸುವುದಾಗಿ ತಿಳಿಸಿದ್ದಾರೆ.