ನವದೆಹಲಿ: ಅನುಕಂಪ ಆಧಾರಿತ ಉದ್ಯೋಗ ನೀಡುವ ಸರ್ಕಾರಿ ನೌಕರಿ ಹಕ್ಕಲ್ಲ, ಅದು ಮಾನವೀಯ ನೆಲೆಯಲ್ಲಿ ನೀಡುವ ವಿನಾಯಿತಿಯಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅನುಕಂಪ ಆಧಾರಿತ ನೌಕರಿ ಒಂದು ರೀತಿಯ ವಿನಾಯಿತಿಯೇ ಹೊರತೂ ಅದು ಹಕ್ಕು ಅಲ್ಲ . ಕುಟುಂಬದ ಸದಸ್ಯ ಹಠಾತ್ ಮರಣ ಹೊಂದಿದಾಗ ಉಂಟಾಗುವ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಆಧಾರಿತ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೇರಳ ಹೈಕೋರ್ಟ್ ಮಹಿಳೆಯೊಬ್ಬರನ್ನು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಕಂಪನಿ ಟ್ರಾವೆಂಕೋರ್ ಲಿ. ಗೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದ್ದು, ನ್ಯಾ. ಎಂ.ಆರ್. ಶಾ ಮತ್ತು ನ್ಯಾ. ಕೃಷ್ಣ ಮುರಾರಿ ಅವರಿದ್ದ ಪೀಠ ವಿಚಾರಣೆ ನಡೆಸಿದೆ.
1995 ಏಪ್ರಿಲ್ ನಲ್ಲಿ ಟ್ರಾವೆಂಕೋರ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಮಹಿಳೆಯ ತಂದೆ ತೀರಿಕೊಂಡಿದ್ದು, ಅವರ ಪತ್ನಿ ಕೂಡ ನೌಕರಿಯಲ್ಲಿದ್ದರು. ಅರ್ಜಿದಾರ ಮಹಿಳೆ ಅನುಕಂಪದ ನೌಕರಿಗೆ ಅರ್ಹಳಲ್ಲ. ತಂದೆ ಮೃತಪಟ್ಟು ಎರಡು ದಶಕಗಳು ಕಳೆದಿದ್ದು, ಈಗ ಅನುಕಂಪದ ನೌಕರಿ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ಪ್ರಕರಣದಲ್ಲಿ ಕುಟುಂಬದಲ್ಲಿ ಇನ್ನೊಬ್ಬ ವ್ಯಕ್ತಿ ಅಂದರೆ ತಾಯಿ ನೌಕರಿಯಲ್ಲಿದ್ದರು. ತಂದೆ ಮೃತಪಟ್ಟ ವೇಳೆ ಪುತ್ರಿ ಅಪ್ರಾಪ್ತಳಾಗಿದ್ದಳು. ತಂದೆ ಮೃತಪಟ್ಟ 14 ವರ್ಷದ ನಂತರ ಅನುಕಂಪದ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಇದು ಸಾಧ್ಯವಿಲ್ಲ. ಅನುಕಂಪದ ನೌಕರಿ ಹಕ್ಕು ಅಲ್ಲ, ಅದು ಸರ್ಕಾರ ನೀಡುವ ವಿನಾಯಿತಿ ಮಾತ್ರ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.