ಬೆಂಗಳೂರು: ರಾಜ್ಯ ಸರ್ಕಾರ ನೂತನವಾಗಿ ಸ್ಥಾಪಿಸಿದ 7 ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಹೊಸದಾಗಿ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ ವಿವಿಗಳನ್ನು ಸ್ಥಾಪಿಸಿದ್ದು, ಇವುಗಳಿಗೆ ಕುಲಪತಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ. ರವಿ ಕೊಪ್ಪಳ ವಿವಿ ಕುಲಪತಿ ಹುದ್ದೆಗೆ ನೇಮಕವಾಗಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿವಿಯ ಡಾ. ಅಶೋಕ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿ ಕುಲಪತಿಯಾಗಿ ನೇಮಕ ಮಾಡಲಾಗಿದೆ.
ಮೈಸೂರು ವಿವಿ ಮಾನವ ಶಾಸ್ತ್ರ ವಿಭಾಗದ ಡಾ.ಎಂ.ಆರ್. ಗಂಗಾಧರ ಅವರನ್ನು ಚಾಮರಾಜನಗರ ವಿವಿಗೆ, ಬೆಳಗಾವಿಯ ಕೆಎಲ್ಎಸ್ ಗೋಗಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿ ಕುಲಪತಿಯಾಗಿ ನೇಮಕ ಮಾಡಲಾಗಿದೆ.
ಕುವೆಂಪು ವಿವಿಯ ಡಾ. ಬಿ.ಎಸ್. ಬಿರಾದಾರ್ ಅವರನ್ನು ಬೀದರ್ ವಿವಿಗೆ, ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಡಾ. ಸುರೇಶ್ ಹೆಚ್ ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿ ಕುಲಪತಿಯಾಗಿ ನೇಮಿಸಲಾಗಿದೆ.
ಧಾರವಾಡ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಸಿ. ತಾರಾನಾಥ್ ಅವರನ್ನು ಹಾಸನ ವಿವಿ ಕುಲಪತಿಯಾಗಿ ನೇಮಿಸಲಾಗಿದೆ. ಜಿಲ್ಲೆಗೆ ಒಂದಾದರೂ ವಿವಿ ಇರಬೇಕು ಎನ್ನುವ ತತ್ವದಡಿಯಲ್ಲಿ ಸರ್ಕಾರ ಈ ವಿವಿಗಳನ್ನು ಸ್ಥಾಪನೆ ಮಾಡಿದೆ. 7 ವಿವಿ ಕುಲಪತಿಗಳ ಹುದ್ದೆಗಳಿಗೆ 174 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.