ಬಾದಾಮಿ ಎಣ್ಣೆ ನಿಮ್ಮ ಎಲ್ಲಾ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿ ಎಣ್ಣೆ ಮುಖದ ಅಂದವನ್ನು ಹೆಚ್ಚಿಸುತ್ತದೆ. ಚರ್ಮದ ಹೊಳಪನ್ನು ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಬಳಕೆ ಮಾಡಿದ್ರೆ ಚರ್ಮದ ಬಹುತೇಕ ಸಮಸ್ಯೆಗಳಿಗೆ ಗುಡ್ ಬೈ ಹೇಳಬಹುದು.
ಬಾದಾಮಿ ಎಣ್ಣೆಯನ್ನು ನಿಯಮಿತವಾಗಿ ಮಸಾಜ್ ಮಾಡುತ್ತ ಬಂದರೆ ಚರ್ಮದ ಮೇಲಿನ ಹಳೆಯ ಕಲೆಗಳು ಮಾಯವಾಗುತ್ತವೆ. ಚರ್ಮದ ರಂಧ್ರಗಳು ತೆರೆದುಕೊಂಡು, ಆಮ್ಲಜನಕ ಜೀವಕೋಶಗಳನ್ನು ತಲುಪುತ್ತದೆ. ವಿಟಮಿನ್ ಎ, ವಿಟಮಿನ್ ಇ, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಸತುವಿನಂತಹ ವಿಶೇಷ ಪೋಷಕಾಂಶಗಳು ಬಾದಾಮಿ ಎಣ್ಣೆಯಲ್ಲಿವೆ.
ರಾತ್ರಿ ಮಲಗುವ ಮುನ್ನ ಹತ್ತಿಯಲ್ಲಿ ಕೆಲವು ಹನಿ ಬಾದಾಮಿ ಎಣ್ಣೆಯನ್ನು ಹಚ್ಚಿ ಮುಖವನ್ನು ಸ್ವಚ್ಛಗೊಳಿಸಿ. ಮುಖದ ಮೇಲೆ ಮೊಡವೆ ಮತ್ತು ಮೊಡವೆಗಳ ಕಲೆಗಳಿದ್ದರೆ ಬಾದಾಮಿ ಎಣ್ಣೆಯನ್ನು ನಿಮ್ಮ ತ್ವಚೆಯ ಆರೈಕೆಯಲ್ಲಿ ಸೇರಿಸಿ. ಇದರಲ್ಲಿರುವ ಆ್ಯಂಟಿ-ಆಕ್ಸಿಡೆಂಟ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಅಂಶಗಳು ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ನಿದ್ರೆಯ ಕೊರತೆ ಅಥವಾ ಅತಿಯಾದ ಒತ್ತಡದಿಂದ ಅನೇಕ ಬಾರಿ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ಸೃಷ್ಟಿಯಾಗುತ್ತವೆ. ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಗೆ ಸ್ವಲ್ಪ ರೋಸ್ ವಾಟರ್ ಅಥವಾ ಜೇನುತುಪ್ಪವನ್ನು ಬೆರೆಸಿ ಕಣ್ಣುಗಳ ಕೆಳಗೆ ಲೇಪಿಸಿಕೊಂಡರೆ ಕಪ್ಪು ವರ್ತುಲಗಳು ಮಾಯವಾಗುತ್ತವೆ. ವಯಸ್ಸು 40 ದಾಟುತ್ತಿದ್ದಂತೆ ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದು ನಿಮ್ಮ ಮುಖದ ಹೊಳಪನ್ನು ಕಡಿಮೆ ಮಾಡುತ್ತದೆ.
ಬಾದಾಮಿ ಎಣ್ಣೆಗೆ ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಸೇರಿಸಿಕೊಂಡು ಅದನ್ನು ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ಹೋಗಲಾಡಿಸಬಹುದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆಯನ್ನು ಲೇಪಿಸಿಕೊಂಡರೆ ಉತ್ತಮ ಪರಿಣಾಮ ಸಿಗುತ್ತದೆ. ಮೊದಲು ಕೈ ಮತ್ತು ಮುಖವನ್ನು ತೊಳೆದುಕೊಳ್ಳಿ, ನಂತರ ಬಾದಾಮಿ ಎಣ್ಣೆಯ ಕೆಲವು ಹನಿಗಳನ್ನು ಅಂಗೈನಲ್ಲಿ ಹಾಕಿ ಉಜ್ಜಿಕೊಳ್ಳಿ. ಎಣ್ಣೆ ಬಿಸಿಯಾದಾಗ ನಿಧಾನವಾಗಿ ಮುಖಕ್ಕೆ ಮಸಾಜ್ ಮಾಡಿ.