ಧಾರವಾಡ: ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆಯಿಂದ ಪ್ರಸಕ್ತ 2021-22ನೇ ಸಾಲಿಗಾಗಿ ವಿಸ್ತರಣಾ ಘಟಕ ಬಲಪಡಿಸುವಿಕೆ ಕಾರ್ಯಕ್ರಮದಡಿಯಲ್ಲಿ, ಹಿತ್ತಲು ಕೋಳಿ ಸಾಕಾಣಿಕೆ ಕೈಗೊಳ್ಳಲು ಆಸಕ್ತ ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿಯಲ್ಲಿ ಒಂದು ಘಟಕಕ್ಕೆ ಆರು ವಾರಗಳ ವಯಸ್ಸಿನ ಐದು ಕೋಳಿ ಮರಿಗಳನ್ನು ವಿತರಿಸಲಾಗುವುದು. ಒಂದು ಘಟಕ ವೆಚ್ಚ 550 ರೂ. ಗಳಾಗಿರುತ್ತದೆ. ಜಿಲ್ಲೆಗೆ ಒಟ್ಟು 352 ಘಟಕಗಳ ಗುರಿ ನಿಗದಿ ಪಡಿಸಲಾಗಿದ್ದು, ಸರ್ಕಾರದ ನಿಯಮಾವಳಿಗಳನ್ವಯ ಫಲಾನುಭವಿಗಳ ಆಯ್ಕೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ದಿವ್ಯಾಂಗರಿಗೆ ಮೀಸಲಾತಿ ನೀಡಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ಅರ್ಜಿಗಳನ್ನು ಕಡ್ಡಾಯವಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಸಲ್ಲಿಸಬೇಕು. ಫಲಾನುಭವಿಗಳನ್ನು ಸರ್ಕಾರದ ನಿಯಮಾಳಿಗಳನ್ವಯ ಆಯ್ಕೆ ಮಾಡಿ ಜಿಲ್ಲಾ ಪಂಚಾಯತ ಅನುಮೋದನೆ ಪಡೆದು ಯೋಜನೆ ಅನುಮೋದನೆಗೊಳಿಸಲಾಗುವುದು. ಆಸಕ್ತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಅರ್ಜಿಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜನವರಿ 10, 2022 ರ ಒಳಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಸಲ್ಲಿಸುವಂತೆ ತಿಳಿಸಲಾಗಿದೆ.