ಬೆಂಗಳೂರು: ಅವಧಿ ಮುಕ್ತಾಯಗೊಂಡ 15 ಸೇರಿದಂತೆ ಒಟ್ಟು 103 ಎ ವರ್ಗದ ದೇವಾಲಯಗಳಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ ಅನ್ವಯ ವ್ಯವಸ್ಥಾಪನಾ ಸಮಿತಿ ರಚಿಸಲು ಆಸಕ್ತ ಭಕ್ತರು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಮುಜರಾಯಿ ಇಲಾಖೆಯ ಹೊಸದಾಗಿ 88 ಮತ್ತು ಅವಧಿ ಮುಕ್ತಾಯಗೊಂಡ 15 ದೇವಾಲಯ ಸೇರಿದಂತೆ 103 ಎ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲಾಗುವುದು. ಇತ್ತೀಚೆಗೆ ನಡೆದ ರಾಜ್ಯ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನ 18 ಮತ್ತು ವಿವಿಧ ಜಿಲ್ಲೆಗಳ 88 ದೇವಾಲಯಗಳಿಗೆ ಹೊಸದಾಗಿ ಮತ್ತು ಅವಧಿ ಮುಕ್ತಾಯಗೊಂಡ ಉಡುಪಿಯ ಮೂರು, ದಕ್ಷಿಣ ಕನ್ನಡದ 11 ದೇವಾಲಯಗಳಿಗೆ ಸಮಿತಿ ರಚಿಸಲು ಅರ್ಜಿ ಆಹ್ವಾನಿಸಲಾಗಿದೆ.
ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತ ಭಕ್ತರು ಸದಸ್ಯತ್ವ ಕೋರಿ ನಿಗದಿತ ಅರ್ಜಿ ಭರ್ತಿ ಮಾಡಿ ನವೆಂಬರ್ 27ರ ಒಳಗೆ ಸಲ್ಲಿಸಬೇಕು. ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಮಿಂಟೋ ಶ್ರೀ ಆಂಜನೇಯ ಭವನ, ಆಲೂರು ವೆಂಕಟರಾವ್ ರಸ್ತೆ, ಚಾಮರಾಜಪೇಟೆ, ಬೆಂಗಳೂರು -18 ಈ ವಿಳಾಸಕ್ಕೆ ನೇರವಾಗಿ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಅರ್ಜಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ www.items.kar.gov.in ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದು.