ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದವರಿಗೆ ಮೈಕ್ರೋ ವೈಯಕ್ತಿಕ ಸಾಲ ಸೇರಿದಂತೆ ಹಲವು ಯೋಜನೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವೆಬ್ ಸೈಟ್ ಆರಂಭಿಸಲಾಗಿದೆ.
ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ್ ನಿಗಮದ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವ 25 ರಿಂದ 50 ವರ್ಷದೊಳಗಿನ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಅರ್ಜಿ ಸಲ್ಲಿಸಬಹುದು. ತಳ್ಳುವ ಗಾಡಿ ವ್ಯಾಪಾರ, ಬೀದಿ ವ್ಯಾಪಾರ ಮೊದಲಾದ ಕೆಲಸದಲ್ಲಿ ತೊಡಗಿದವರಿಗೆ 10,000 ರೂ. ಅಲ್ಪಾವಧಿ ಸಾಲ ನೀಡಲಾಗುವುದು ಎಂದು ಹೇಳಿದ್ದಾರೆ.
ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಯೋಜನೆ ರೂಪಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 10 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣು ಮಕ್ಕಳಿಗೆ ನೆರವಾಗಿದ್ದ ಶಾದಿಭಾಗ್ಯ ಯೋಜನೆಯನ್ನು ಹೆಸರು ಬದಲಿಸಿ ಪುನಃ ಜಾರಿಗೊಳಿಸಲು ಸಿಎಂಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.