ಶಿವಮೊಗ್ಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು 2021-22ನೇ ಸಾಲಿನ ಜಿಲ್ಲಾ ವಲಯದ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೊಳಪಡುವ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ವಿವಿಧ ಯೋಜನೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ಸೃಜನ ಯೋಜನೆ (ಸಾಮಾನ್ಯ):
ಗ್ರಾಮೀಣ ಪ್ರದೇಶದಲ್ಲಿ ಸ್ವಉದ್ಯೋಗದಲ್ಲಿ ತೊಡಗುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನ ಘಟಕ (ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ.) ಸೇವಾ ವಲಯದ ಘಟಕ (ಗರಿಷ್ಠ ಯೋಜನಾ ವೆಚ್ಚ 5 ಲಕ್ಷ ರೂ.)ಗಳನ್ನು ಪ್ರಾರಂಭಿಸಲು ಹಣಕಾಸು ಸಂಸ್ಥೆ/ಬ್ಯಾಂಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಸಾಮಾನ್ಯ ವರ್ಗದವರಿಗೆ ಶೇ.25 (ಗರಿಷ್ಠ 2.50 ಲಕ್ಷ ರೂ.) ಹಾಗೂ ವಿಶೇಷ ವರ್ಗದವರಿಗೆ ಶೇ.35 ರಂತೆ (ಗರಿಷ್ಠ 3.50 ಲಕ್ಷ ರೂ.) ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.
ಸ್ವಯಂ ಉದ್ಯೋಗ ಸೃಜನಯೋಜನೆ (ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ):
ಗ್ರಾಮೀಣ ಪ್ರದೇಶದಲ್ಲಿ ಸ್ವಉದ್ಯೋಗದಲ್ಲಿ ತೊಡಗುವ ಅಭ್ಯರ್ಥಿಗಳು ಕೈಗಾರಿಕಾ ಉತ್ಪಾದನಾ ಮತ್ತು ಸೇವಾ ವಲಯಘಟಕ(ಗರಿಷ್ಠ ಯೋಜನಾ ವೆಚ್ಚ 10 ಲಕ್ಷ ರೂ.)ಗಳನ್ನು ಪ್ರಾರಂಭಿಸಲು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಹಣಕಾಸು ಸಂಸ್ಥೆ/ಬ್ಯಾಂಕುಗಳಿಗೆ ಸಾಲ ಹಾಗೂ ಇಲಾಖೆಯಿಂದ ಶೇ.60 ರಂತೆ ಗರಿಷ್ಠ 5 ಲಕ್ಷ ರೂ.ಗಳವರೆಗೆ ಸಹಾಯಧನ ಸೌಲಭ್ಯ ನೀಡಲು ಅವಕಾಶವಿರುತ್ತದೆ.
ತರಬೇತಿ:
ಕುಶಲಕರ್ಮಿ ತರಬೇತಿ ಸಂಸ್ಥೆ (ಮಲ್ಟಿ ಸ್ಕಿಲ್ ಟ್ರೈನಿಂಗ್ ಸೆಂಟರ್), ಸಾಗರ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ಯುವಕ/ಯುವತಿ/ಉದಯೋನ್ಮುಖ ಉದ್ದಿಮೆದಾರರುಗಳಿಗೆ ಪ್ರಸ್ತುತ ಸಾಲಿಗೆ 3 ತಿಂಗಳ ಅವಧಿಯ ಇಂಡಸ್ಟ್ರಿಯಲ್ ಸೀವಿಂಗ್ ಮಷಿನ್ ಆಪರೇಟರ್, 3 ತಿಂಗಳ ಅವಧಿಯ ಕಂಪ್ಯೂಟರ್ ಬೇಸಿಕ್ ತರಬೇತಿ, 10 ತಿಂಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ವಸತಿ/ವಸತಿಯೇತರವಾಗಿ ಉಚಿತವಾಗಿ ನೀಡಲು ಅವಕಾಶವಿರುತ್ತದೆ.
ವೃತ್ತಿನಿರತ ಕುಶಲಕರ್ಮಿ/ವೃತ್ತಿಪರರಿಗೆ ಉಚಿತ ಸುಧಾರಿತ ಉಪಕರಣ:
ಪ್ರಸ್ತುತ ಸಾಲಿಗೆ ಗ್ರಾಮೀಣ ಪ್ರದೇಶದ ವೃತ್ತಿಪರ/ವೃತ್ತಿನಿರತ ಬಡಗಿ, ಮೇಸನ್(ಗಾರೆ), ಹೊಲಿಗೆ (ಮಹಿಳೆಯರಿಗೆ) ವೃತ್ತಿಗಳಲ್ಲಿ ತೊಡಗಿರುವವರಿಗೆ ತಲಾ ಗರಿಷ್ಠ 8,000 ರೂ. ಮೊತ್ತದ ಸುಧಾರಿತ ಉಪಕರಣಗಳ ಕಿಟ್ ಅನ್ನು ಉಚಿತವಾಗಿ ನೀಡಲು ಅವಕಾಶವಿರುತ್ತದೆ.
ಸಣ್ಣ ಕೈಗಾರಿಕೆಗಳ ಕುಶಲಕರ್ಮಿಗಳು ಸೇರಿದಂತೆ ಕುಶಲಕರ್ಮಿಗಳಿಗೆ ಬಡ್ಡಿ ಸಹಾಯಧನ:
ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್/ಹಣಕಾಸು ಸಂದ್ಥೆ ಮೂಲಕ ಸಾಲ ಸೌಲಭ್ಯ ಪಡೆದು ಸ್ಥಾಪಿಸಲಾಗಿರುವ ಸೂಕ್ಷ್ಮಗ್ರಾಮೀಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ಅತೀ ಸಣ್ಣ ಕೈಗಾರಿಕೆಗಳು ಕುಶಲ ಕರ್ಮಿ ವೃತ್ತಿಗಳಿಗೆ ಹಣಕಾಸು ಸಂಸ್ಥೆ, ಬ್ಯಾಂಕ್‍ಗಳು ವಿಧಿಸುವ ಅವಧಿ ಸಾಲದ ಬಡ್ಡಿಯ ಮೇಲೆ ಇತರೆ ವರ್ಗದವರಿಗೆ ಶೇ.5 ರಂತೆ, ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಮಹಿಳೆ, ಅಲ್ಪ ಸಂಖ್ಯಾತರು, ಹಿಂದುಳಿ ವರ್ಗ-1 ಹಾಗೂ ವಿಕಲಚೇತನರು ಮತ್ತು ಮಾಜಿ ಸೈನಿಕ ಉದ್ದಿಮೆದಾರರುಗಳಿಗೆ ಶೇ.6 ರಂತೆ ಬಡ್ಡಿ ಸಹಾಯಧನವನ್ನು ನೀಡಬಹುದಾಗಿರುತ್ತದೆ. ಜಿಲ್ಲೆಯ ಪ್ರತಿ ಉದ್ದಿಮೆಗೆ ಸೊರಬ ತಾಲ್ಲೂಕಿಗೆ 6 ವರ್ಷ, ಹೊಸನಗರ ತಾಲ್ಲೂಕಿಗೆ 5 ವರ್ಷ, ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ತಾಲ್ಲೂಕುಗಳಿಗೆ 4 ವರ್ಷದ ಅವಧಿಗಳಿಗೆ ಬಡ್ಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ಸಂಬಂಧಪಟ್ಟ ಕಛೇರಿಯಿಂದ ಪಡೆದು ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 30-06-2021 ರೊಳಗಾಗಿ ಕಛೇರಿಗೆ ಸಲ್ಲಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಳಿಗಾಗಿ ಕಛೇರಿಯ ಕೆಲಸದ ಅವಧಿಯಲ್ಲಿ ದೂರವಾಣಿ ಸಂ: 08182-223376/295689, ಕೈಗಾರಿಕಾ ವಿಸ್ತರಣಾಧಿಕಾರಿಗಳು ಶಿವಮೊಗ್ಗ ಮತ್ತು ಭದ್ರಾವತಿ: 9916565620, ಶಿಕಾರಿಪುರ ಮತ್ತು ಸೊರಬ: 9481743640, ಸಾಗರ: 9448401714, ಹೊಸನಗರ ಮತ್ತು ತೀರ್ಥಹಳ್ಳಿ: 9449948663 ಗಳನ್ನು ಸಂಪರ್ಕಿಸುವುದು.