ಬೆಂಗಳೂರು: ಶಾಲಾ ಸಮಯಕ್ಕೆ ಬಸ್ ಗಳ ಮಾಹಿತಿಗಾಗಿ ಆಪ್ ಗಳನ್ನು ರಚಿಸುವಂತೆ ಸದನ ಸಮಿತಿ ಶಿಫಾರಸು ಮಾಡಿದೆ.
ಸಾರ್ವಜನಿಕ ಉದ್ಯಮಗಳ ಸಮಿತಿ ಈ ಕುರಿತಾಗಿ ಶಿಫಾರಸು ಮಾಡಿದ್ದು, ಶಾಲಾ ಮಕ್ಕಳ ಓಡಾಟಕ್ಕೆ ಅನುಕೂಲವಾಗುವಂತೆ ಬಸ್ ಗಳ ನಿಖರವಾದ ಸಮಯ ಮತ್ತು ಸಂಚಾರದ ಕುರಿತು ಸೂಕ್ತ ಮಾಹಿತಿ ನೀಡುವ ಅಪ್ಲಿಕೇಶನ್ ಗಳನ್ನು ರಚನೆ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಸಮಿತಿ ಅಧ್ಯಕ್ಷ ಜಿ.ಹೆಚ್. ತಿಪ್ಪಾರೆಡ್ಡಿ ಅವರು ವರದಿ ಮಂಡಿಸಿದ್ದು, ಅಪ್ಲಿಕೇಶನ್ ಗಳಲ್ಲಿ ಬಸ್ ಗಳ ಸಂಚಾರದ ಸಮಯ ಕುರಿತು ನೈಜ ಮಾಹಿತಿ ಸಿಗುವಂತೆ ನೋಡಿಕೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳು ಶಾಲೆಗಳಿಗೆ ಹೋಗಿ ಬರಲು ಇರುವ ಬಸ್ ಗಳನ್ನು ಕಡ್ಡಾಯವಾಗಿ ಓಡಿಸಬೇಕು. ಯಾವುದೇ ಅಡಚಣೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿವಿಧ ಡಿಪೋ ಗಳಿಂದ ಒಂದೇ ಮಾರ್ಗದಲ್ಲಿ ಬಸ್ ಗಳ ಸಂಚಾರ ಇದ್ದಲ್ಲಿ ಅವುಗಳ ವೇಳಾಪಟ್ಟಿ ಪರಿಶೀಲಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಹೇಳಲಾಗಿದೆ.