ಆಪಲ್ ವಾಚ್ ಅತಿ ದುಬಾರಿ ಬೆಲೆಯದ್ದು ಎಂಬುದು ಮಧ್ಯಮವರ್ಗದವರ ಮಾತು. ಆದರೆ ಇದರಲ್ಲಿ ಲಭ್ಯವಿರುವ ತಂತ್ರಜ್ಞಾನದ ಬಗ್ಗೆ ಮೆಚ್ಚುಗೆ ಇದೆ. ತುರ್ತು ಸಂದರ್ಭಗಳಲ್ಲಿ ಇದು ನೀಡುವ ಎಚ್ಚರಿಕೆಯು ಹಲವಾರು ಸಂದರ್ಭಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚೆಗೆ ದೆಹಲಿಯ ಮಹಿಳೆಯೊಬ್ಬರು ಆಪಲ್ ವಾಚ್ ಬಗ್ಗೆ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡಿದ್ದಾರೆ. ವಾಚ್ ತಮ್ಮ ಗಮನವನ್ನು ಸೆಳೆಯದಿದ್ದರೆ ನಾನು ಮಾರಕವಾಗಬಹುದಾದ ವೈದ್ಯಕೀಯ ಸಮಸ್ಯೆಗೆ ತುತ್ತಾಗುತ್ತಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಜೆಎನ್‌ಯುನಲ್ಲಿ ಪಿಎಚ್‌ಡಿ ವಿದ್ವಾಂಸರಾಗಿರುವ ಸ್ನೇಹಾ ಸಿನ್ಹಾ ಅವರ ಹೃದಯ ಬಡಿತ ಅಪಾಯಕಾರಿ ಮಟ್ಟವಾದ ನಿಮಿಷವೊಂದಕ್ಕೆ 250 ಬಡಿತಗಳಿಗೆ ಏರಿತ್ತು. ಈ ಬಗ್ಗೆ ಆಪಲ್ ವಾಚ್ ಎಚ್ಚರಿಸಿ ಸೂಚನೆ ನೀಡಿದ್ದನ್ನ ಅವರು ವಿವರಿಸಿದ್ದಾರೆ.
2 ವರ್ಷದಿಂದ ಆಪಲ್ ವಾಚ್ ಬಳಸ್ತಿದ್ದ ಸ್ನೇಹಾ ಸಿನ್ಹಾ ಅವರು ಅಪಾಯಕಾರಿ ಮಟ್ಟದ ಹೃದಯ ಬಡಿತದ ಸೂಚನೆಯನ್ನ ವಾಚ್ ನಿಂದ ಸ್ವೀಕರಿಸಿದ್ದಾರೆ. ಮನೆಗೆ ಹಿಂದಿರುಗಿದಾಗ ಜೋರಾದ ಹೃದಯ ಬಡಿತವನ್ನು ಅನುಭವಿಸಿದರು. ಆದಾಗ್ಯೂ, ಅವರ ಆಪಲ್ ವಾಚ್‌ನ ಬ್ಯಾಟರಿ ಖಾಲಿಯಾಗಿತ್ತು. ನಂತರ ಅದನ್ನು ಚಾರ್ಜ್ ಮಾಡಿ ಪವರ್ ಆನ್ ಆಗುವವರೆಗೆ ಕಾಯುತ್ತಿದ್ದರು.
ವಾಚ್ ಸತತವಾಗಿ ಹೆಚ್ಚಿನ ಹೃದಯ ಬಡಿತದ ಸೂಚನೆಯನ್ನು ಪ್ರದರ್ಶಿಸಿದ್ದು, ವೈದ್ಯಕೀಯ ಸೇವೆ ಪಡೆಯಲು ಸೂಚಿಸಿದೆ. ಈ ಬಗ್ಗೆ ನಿರ್ಲಕ್ಯ್ಹ ವಹಿಸಿದ ಸ್ನೇಹಾ, ವಾಚ್ ಸಹಜ ಸ್ಥಿತಿಗೆ ಮರಳುತ್ತದೆಂದು ಸುಮ್ಮನಾಗಿದ್ದಾರೆ. ಆದರೆ ಒಂದೂವರೆ ಗಂಟೆ ನಂತರ ಅವರ ಗಡಿಯಾರವು “ಹೃತ್ಕರ್ಣದ ಕಂಪನ” ತೋರಿಸಿತು. ಇದು ಹೃದಯದ ಗಂಭೀರ ಸಮಸ್ಯೆಯಾಗಿದೆ. ತಕ್ಷಣ ಆತಂಕಗೊಂಡ ಅವರು ತಮ್ಮ ಸ್ನೇಹಿತೆಗೆ ಕರೆ ಮಾಡಿ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡಿದ್ದಾರೆ.
ಆಕೆಯ ಹೃದಯದ ಬಡಿತ ಜೋರಾಗಿದ್ದನ್ನು ಆಸ್ಪತ್ರೆಯಲ್ಲಿ ವೈದ್ಯರು ಕಂಡುಕೊಂಡರು. ಅದು ಸಾಮಾನ್ಯ ಬಡಿತಕ್ಕಿಂತ ಹೆಚ್ಚು ವೇಗವಾಗಿತ್ತು. ಈ ವೇಳೆ ಅವರ ರಕ್ತದೊತ್ತಡವನ್ನು ಅಳೆಯಲು ಸಹ ಸಾಧ್ಯವಾಗಲಿಲ್ಲ. ಆದ್ದರಿಂದ ವೈದ್ಯರು ಶೀಘ್ರವಾಗಿ ಹೃದಯದ ಲಯವನ್ನು ಸರಿಪಡಿಸಲು DC ಶಾಕ್ಸ್ ಎಂಬ ಚಿಕಿತ್ಸೆಯನ್ನು ನೀಡಿದರು.
ಸಂಭವಿಸಬಹುದಾದ ಅಪಾಯಕ್ಕಿಂತ ಮೊದಲೇ ನಾನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬಂದೆ ಎಂದಿರುವ ಸ್ನೇಹಾ, ಈ ಮುಂಚೆ ನಾನು ಆರೋಗ್ಯವಾಗಿದ್ದೆ ಮತ್ತು ಹೆಚ್ಚು ಎತ್ತರದ ಪರ್ವತಗಳನ್ನು ಹತ್ತುತ್ತಿದ್ದೆ ಎಂದಿದ್ದಾರೆ.
ಆಪಲ್ ವಾಚ್ ಗೆ ಕೃತಜ್ಞತೆ ಸಲ್ಲಿಸಿರುವ ಅವರು ಈ ಗಡಿಯಾರ ಇಲ್ಲದಿದ್ದರೆ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೆ ಎಂದರು.