ಕಳೆದ ಎರಡು ವರ್ಷಗಳಿಂದ ವಿಶ್ವವನ್ನು ಇನ್ನಿಲ್ಲದಂತೆ ಕಾಡಿದ ಕೊರೊನಾ ಮಹಾಮಾರಿ ಈಗ ತಹಬದಿಗೆ ಬಂದಿದೆ. ಹೀಗಾಗಿ ಬಹುತೇಕ ಎಲ್ಲವೂ ಕೊರೊನಾ ಪೂರ್ವದ ಸಹಜ ಸ್ಥಿತಿಗೆ ಮರಳಿದೆ. ಆದರೆ ಐಟಿ ಸೇರಿದಂತೆ ಬಹಳಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’ ಮುಂದುವರಿಸಿವೆ.
ಇದೀಗ ಕೊರೊನಾ ಸೋಂಕು ಕಡಿಮೆಯಾಗಿರುವ ಕಾರಣ ಕಂಪನಿಗಳು, ವಾರದಲ್ಲಿ ಮೂರು ದಿನಗಳ ಕಾಲವಾದರೂ ಕಚೇರಿಯಿಂದಲೇ ಕಾರ್ಯನಿರ್ವಹಿಸಲು ಕರೆ ನೀಡುತ್ತಿವೆ. ಇದೇ ರೀತಿ ಆಪಲ್ ಸಿಇಓ ಟಿಮ್ ಕುಕ್ ವಾರದಲ್ಲಿ ಮೂರು ದಿನಗಳ ಕಾಲ ಕಚೇರಿಗೆ ಬರುವಂತೆ ಹೇಳಿದ ಕಾರಣ ಉದ್ಯೋಗಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಆಪಲ್ ಉದ್ಯೋಗಿಗಳು ಸಹಿ ಅಭಿಯಾನವನ್ನು ಆರಂಭಿಸಿದ್ದು, ಉದ್ಯೋಗಿಗಳು ‘ವರ್ಕ್ ಫ್ರಂ ಹೋಂ’ ನಲ್ಲೇ ಹೆಚ್ಚಿನ ಕಾರ್ಯ ಕ್ಷಮತೆ ತೋರಿರುವುದರಿಂದ ಅದನ್ನೇ ಮುಂದುವರಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಉದ್ಯೋಗಿಗಳು ತಮ್ಮ ಮ್ಯಾನೇಜರ್ ಜೊತೆ ಚರ್ಚಿಸಿ ಕಾರ್ಯವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ.
‘ವರ್ಕ್ ಫ್ರಂ ಹೋಂ’ ನಿಂದಾಗಿ ವೈಯಕ್ತಿಕವಾಗಿ ತಮಗೆ ಹಾಗೂ ಕಂಪನಿಗೆ ಆಗಿರುವ ಲಾಭದ ಕುರಿತು ತಿಳಿಸಿದ್ದು, ಉದ್ಯೋಗ ನಿರ್ವಹಿಸುವ ಕುರಿತಂತೆ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಉದ್ಯೋಗಿಗಳಿಗೇ ನೀಡಬೇಕೆಂದು ಒತ್ತಾಯಿಸಲಾಗಿದೆ.