ಪೊಲೀಸ್ ವ್ಯವಸ್ಥೆಯನ್ನು ಪಾರದರ್ಶಕ, ಸ್ವತಂತ್ರ ಹಾಗೂ ಜವಾಬ್ದಾರಿಯುತವಾಗಿ ಮಾಡಿ ಜನಸ್ನೇಹಿಯಾಗಿ ಮಾಡಲು ’ಮಾದರಿ ಪೊಲೀಸ್ ಕಾನೂನು’ ತರಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ದೆಹಲಿ ಬಿಜೆಪಿಯ ಮಾಜಿ ವಕ್ತಾರ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಈ ಅರ್ಜಿ ಸಲ್ಲಿಸಿದ್ದು; ಅಭಿವೃದ್ಧಿ ಹೊಂದಿದ ದೇಶಗಳ, ಅದರಲ್ಲೂ ಅಮೆರಿಕ, ಸಿಂಗಪುರ ಮತ್ತು ಫ್ರಾನ್ಸ್, ಪೊಲೀಸ್ ಕಾನೂನುಗಳ ಅಧ್ಯಯನ ನಡೆಸಿ, ’ಮಾದರಿ ಪೊಲೀಸ್ ಕಾನೂನು’ ರಚಿಸಲು ’ನ್ಯಾಯಾಂಗ ಸಮಿತಿ’ ರಚಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಆಲಿಕೆಗೆ ಬರಬಹುದಾದ ಈ ಅರ್ಜಿಯ ಮೂಲಕ, ಮೇಲ್ಕಂಡ ದೇಶಗಳ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸಿ ನಮ್ಮ ದೇಶದಲ್ಲೂ ಸಹ ’ಕಾನೂನು ಪಾಲನೆ’ ಮಾಡಲು ಸುವ್ಯವಸ್ಥಿತ ಹಾಗೂ ಸುಸಂಸ್ಕೃತ ಪೊಲೀಸ್ ವ್ಯವಸ್ಥೆ ರಚನೆ ಮಾಡುವ ಮೂಲಕ ನಾಗರಿಕರ ಜೀವ, ಸ್ವತಂತ್ರ್ಯ ಹಾಗೂ ಘನತೆಯನ್ನು ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ ಅರ್ಜಿದಾರರು.
SHOCKING: 2 ನಿಮಿಷಗಳ ಅಂತರದಲ್ಲಿ ಯುವಕನಿಗೆ ಎರಡು ಡೋಸ್ ಕೋವಿಶೀಲ್ಡ್ ಲಸಿಕೆ
’ನಮ್ಮಲ್ಲಿ ಜನರ ಪೊಲೀಸ್ ಬದಲಿಗೆ ಆಳುವವರ ಪೊಲೀಸ್’ ಇರುವ ಕಾರಣದಿಂದ 1990ರ ಕಾಶ್ಮೀರ ಹತ್ಯಾಕಾಂಡದಂಥ ಘಟನೆಗಳು ಹಾಡಹಗಲೇ ಜರುಗಿವೆ ಎಂದ ಅಶ್ವಿನಿ, “1990ರಲ್ಲಿ ಕಾಶ್ಮೀರದಲ್ಲಿ ಆಗಿದ್ದು, 2021ರಲ್ಲಿ ಬಂಗಾಳದಲ್ಲೂ ಆಗಿವೆ, ಅದೂ ಹಾಡಹಗಲೇ. ಆದರೆ ಪೊಲೀಸರಿಗೆ ಏನೂ ಮಾಡಲು ಆಗಿಲ್ಲ ಏಕೆಂದರೆ ನಮ್ಮಲ್ಲಿ ಆಳುವವರ ಪೊಲೀಸರಿದ್ದಾರೆಯೇ ಹೊರತು ಜನರ ಪೊಲೀಸರಲ್ಲ. 1861ರ ವಸಾಹತುಶಾಹಿ ಕಾಲದ ಪೊಲೀಸ್ ಕಾಯಿದೆ ಇಂದಿನ ದಿನಮಾನದಲ್ಲಿ ಪರಿಣಾಮಕಾರಿಯಾಗಿಲ್ಲ. ಈ ಕಾಯಿದೆಯು ಕಾನೂನು ಸುವ್ಯವಸ್ಥೆ, ಪ್ರಜೆಗಳ ಜೀವಿಸುವ ಹಕ್ಕು ಹಾಗೂ ಇನ್ನಿತರ ಅಮೂಲ್ಯವಾದ ಮೂಲಭೂತ ಹಕ್ಕುಗಳನ್ನು ಕಾಪಾಡಲು ವಿಫಲವಾಗಿದೆ ಆದರೂ ಕಾರ್ಯಾಂಗದಿಂದ ಈ ನಿಟ್ಟಿನಲ್ಲಿ ಯಾವುದೇ ತಿದ್ದುಪಡಿ ಆಗಿಲ್ಲ” ಎಂದು ಅರ್ಜಿದಾರರು ಹೇಳಿದ್ದಾರೆ.
“ಬಹಳಷ್ಟು ಬಾರಿ ಪೊಲೀಸರು ಶಾಸಕರು ಅಥವಾ ಸಂಸದರ ಅಪ್ಪಣೆ ಇಲ್ಲದೇ ಪೊಲೀಸರು ಎಫ್ಐಆರ್ ಸಹ ದಾಖಲಿಸುವುದಿಲ್ಲ. ಇಂದಿಗೂ ಸಹ ಕೋರ್ಟ್ ಆದೇಶದ ಮೇಲೆ ಎಫ್ಐಆರ್ ದಾಖಲಿಸಿದರೂ ಸಹ ಆಪಾದಿತರ ವಿರುದ್ಧ ಯಾವ ಕಾನೂನುಗಳ ಅಡಿ ಕ್ರಮ ತೆಗೆದುಕೊಳ್ಳಬೇಕೆಂದು ಆಳುವ ಪಕ್ಷದ ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಕಾನೂನಿನ ಆಳ್ವಿಕೆ, ಪ್ರಜೆಗಳ ಜೀವಿಸುವ ಹಕ್ಕುಗಳ ರಕ್ಷಣೆಗೆ ಇರುವ ಅತಿ ದೊಡ್ಡ ಅಡಚಣೆಗಳಲ್ಲಿ ಒಂದು ಪೊಲೀಸ್ ವ್ಯವಸ್ಥೆಯೊಳಗಿನ ರಾಜಕೀಯ. ಆಳುವ ಪಕ್ಷಗಳಿಗೆ ತಮ್ಮ ನಿಯತ್ತು ತೋರಲು ದೊಡ್ಡ ಸಂಖ್ಯೆಯಲ್ಲಿ ಅಧಿಕಾರಿಗಳು ತಮ್ಮ ಹಣೆಗಳ ಮೇಲೆ ಅಗೋಚರವಾದ ಸ್ಟಾಂಪ್ಗಳನ್ನು ಹೊತ್ತು ಸಾಗುತ್ತಾರೆ” ಎಂದು ಪಿಐಎಲ್ನಲ್ಲಿ ತಿಳಿಸಲಾಗಿದೆ.
“1984ರ ಸಿಖ್ ಹತ್ಯಾಕಾಂಡ, 1990ರ ಕಾಶ್ಮೀರ ಹತ್ಯಾಕಾಂಡ ಹಾಗೂ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ಹಿಂಸಾಚಾರಗಳು ಒಂದು ವೇಳೆ ಪೊಲೀಸರಿಗೆ ಕಾರ್ಯಾಚರಣಾ ಸ್ವಾತಂತ್ರ್ಯವಿದ್ದಿದ್ದರೆ ನಮ್ಮ ಇತಿಹಾಸದಲ್ಲಿ ದಾಖಲಾಗುತ್ತಲೇ ಇರಲಿಲ್ಲ” ಎಂದು ಅರ್ಜಿಯಲ್ಲಿ ಗಂಭಿರವಾಗಿ ಬೆಳಕು ಚೆಲ್ಲಲಾಗಿದೆ.