ಅಯೋಧ್ಯೆ: ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ, ತಾಳ್ಮೆಯಿಂದ ಇರುವಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಮಂಗಳವಾರ ಮನವಿ ಮಾಡಿದ್ದಾರೆ.
ದೇವಾಲಯದ ಭದ್ರತೆ ನಿರ್ವಹಣಾ ಅಧಿಕಾರಿಗಳು ಇಂದು ಮುಂಜಾನೆ ಭಾರಿ ಯಾತ್ರಾರ್ಥಿಗಳ ಗುಂಪನ್ನು ನಿಯಂತ್ರಿಸಲು ಕಷ್ಟಪಟ್ಟ ನಂತರ ಈ ಹೇಳಿಕೆ ಬಂದಿದೆ.
ಎಲ್ಲ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದರ್ಶನವು ನಿರಂತರವಾಗಿ ನಡೆಯುತ್ತಿದೆ. ಭಕ್ತರು ತಾಳ್ಮೆಯಿಂದ ಇರಬೇಕೆಂದು ಹೇಳಿದ್ದಾರೆ.
ಇಂದು ಮುಂಜಾನೆ, ‘ಪ್ರಾಣ ಪ್ರತಿಷ್ಠಾ’ದ ಒಂದು ದಿನದ ನಂತರ ರಾಮಲಲ್ಲಾನ ದರ್ಶನ ಪಡೆಯಲು ರಾಮಮಂದಿರಕ್ಕೆ ಅಪಾರ ಸಂಖ್ಯೆಯ ಭಕ್ತರು ಹರಿದು ಬಂದರು.
ಸುಮಾರು 3 ಲಕ್ಷ ಜನರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೊರಗೆ ಕಾಯುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಸೋಮವಾರ ರಾತ್ರಿಯಿಂದಲೇ ಕೆಲವರು ಸರತಿ ಸಾಲಿನಲ್ಲಿ ನಿಂತಿದ್ದರು.
ರಾಮಮಂದಿರದ ಗರ್ಭಗುಡಿಯೊಳಗೆ ಜನಸಂದಣಿಯನ್ನು ನಿರ್ವಹಿಸಲು ಸ್ವತಃ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉತ್ತರ ಪ್ರದೇಶ ಡಿಜಿ(ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಭಕ್ತಾದಿಗಳಿಗೆ ತೆರೆಯಲಾಗಿರುವ ದೇವಾಲಯದ ವ್ಯವಸ್ಥೆಗಳನ್ನು ನೋಡಲು ಆದಿತ್ಯನಾಥ್ ವಿಮಾನದ ಮೂಲಕ ಅಯೋಧ್ಯೆಗೆ ತಲುಪಿದ್ದಾರೆ ಎಂದು ಮಾಹಿತಿ ನಿರ್ದೇಶಕ ಶಿಶಿರ್ ತಿಳಿಸಿದ್ದಾರೆ. ಮಧ್ಯಾಹ್ನದವರೆಗೆ, 2.5 ರಿಂದ 3 ಲಕ್ಷ ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ. ಅಷ್ಟೇ ಸಂಖ್ಯೆಯ ಭಕ್ತರು ಕಾಯುತ್ತಿದ್ದಾರೆ. 8,000 ಕ್ಕೂ ಹೆಚ್ಚು ಪೊಲೀಸರು ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.