ಬೆಂಗಳೂರು: ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಸಹಾಯಕ ನಿಯಂತ್ರಕರು, ಗ್ರೂಪ್ ಬಿ ಲೆಕ್ಕ ಪರಿಶೋಧನಾ ಅಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಒಂದು ಬಾರಿಗೆ ವಯೋಮಿತಿ ಸಡಿಲಿಸಿ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಮನವಿ ಮಾಡಿದ್ದಾರೆ.
43 ಸಹಾಯಕ ನಿಯಂತ್ರಕರು, 54 ಲೆಕ್ಕಪರಿಶೋಧನಾಧಿಕಾರಿ ಹುದ್ದೆಗಳ ಭರ್ತಿಗೆ ಮಾರ್ಚ್ 1ರಂದು ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಮಾರ್ಚ್ 18ರಿಂದ ಏಪ್ರಿಲ್ 17ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 2ರಂದು ಪೂರ್ವಭಾವಿ ಪರೀಕ್ಷೆಗೆ ತಾತ್ಕಾಲಿಕ ದಿನ ನಿಗದಿಪಡಿಸಲಾಗಿದೆ.
ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ ನಿಯಮಗಳ ಅಡಿಯಲ್ಲಿಯೇ ಈ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಪ್ರೊಬೇಷನರ್ಸ್ ಹುದ್ದೆಗಳಿಗೆ ವಯೋಮಿತಿ ಸಡಿಲಿಸಿದ ರೀತಿಯಲ್ಲೇ ಈ ಹುದ್ದೆಗಳಿಗೂ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಕೋರಿದ್ದಾರೆ.
ಕೊರೋನಾ ಕಾರಣದಿಂದಾಗಿ ಈ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ. ಆಕಾಂಕ್ಷಿಗಳಾಗಿರುವ ಅನೇಕ ಅಭ್ಯರ್ಥಿಗಳ ವಯೋಮಿತಿ ಮೀರಿದ್ದು, ಒಂದು ಬಾರಿ ವಯೋಮಿತಿ ಸಡಿಲಿಸಿ ನ್ಯಾಯ ಕೊಡುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಪರಿಗಣಿಸಿ ಒಂದು ಬಾರಿಗೆ ವಯೋಮಿತಿ ಸಲ್ಲಿಸಿ ಅವಕಾಶ ಕಲ್ಪಿಸಬೇಕೆಂದು ಸಚಿವರು ಕೋರಿದ್ದಾರೆ.