ಬೆಂಗಳೂರು: ಅಪೋಲೊ, ಮೆಡ್ ಪ್ಲಸ್ ಔಷದಿ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಜೆ.ಸಿ.ನಗರ ನಿವಾಸಿ ಸಮಿ ಉದ್ದಿನ್ ಬಂಧಿತ ಆರೋಪಿ. ಬೆಂಗಳೂರಿನಲ್ಲಿ 13 ಕಡೆ ಈತನೊಬ್ಬನೇ ಕಳ್ಳತನ ಮಾಡಿದ್ದ. ಹಲವೆಡೆ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ರಾತ್ರಿ ವೇಳೆ ಹೆಲ್ಮೆಟ್ ಧರಿಸಿ ಔಷಧಾಲಯಗಳಿಗೆ ನುಗ್ಗುತ್ತಿದ್ದ ಈತ ಚಾಕು ತೋರಿಸಿ ಕ್ಯಾಶ್ ಕೌಂಟರ್ ನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗುತ್ತಿದ್ದ. ಕೆಲವೆಡೆಗಳಲ್ಲಿ ಔಷಧ ಅಂಗಡಿಯಲ್ಲಿ ಚಾಕು ತೋರಿಸಿ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ ವೇಳೆ ಯಾರಾದರೂ ತಡೆಯಲು ಮುಂದಾದರೆ ಅವರಿಗೆ ಚಾಕು ಇರಿದ ಘಟನೆಗಳು ನಡೆದಿತ್ತು ಎನ್ನಲಾಗಿದೆ.
ಬೆಂಗಳೂರಿನಲ್ಲಿ ನಡೆದ 13 ಔಷಧ ಅಂಗಡಿಗಳ ಕಳ್ಳತನವನ್ನು ಈತನೊಬ್ಬನೇ ಮಾಡಿದ್ದ ಎಂದು ತಿಳಿದುಬಂದಿದೆ. ಮೆಡಿಕಲ್ ಶಾಪ್ ತೆರೆಯುವ ವೇಳೆ ಇಲ್ಲವೇ ರಾತ್ರಿ ಬಾಗಿಲು ಮುಚ್ಚುವ ವೇಳೆ ಪ್ಲಾನ್ ಮಾಡಿ ಕಳ್ಳತನ ಮಾಡುತ್ತಿದ್ದ. ಹೆಚ್.ಎಸ್ ಆರ್ ಲೇಔಟ್, ಮಾರತ್ ಹಳ್ಳಿ, ಕೆಂಗೇರಿ, ಹೆಬ್ಬಗೋಡಿ, ಬೆಳ್ಳಂದೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ ಸಮಿ ಉದ್ದಿನ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಧ್ಯ ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.