ಹಾವೇರಿ: ಮೆಣಸಿನ ಕಾಯಿ ಬೆಳೆಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸೋಮವಾರ ನಡೆದ ಘಟನೆ ಆಗಬಾರದಿತ್ತು. ರೈತರು ಬೆಳೆಗೆ ತಕ್ಕ ಬೆಲೆ ಸಿಗದಿದ್ದರೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಬಹುದು. ಆದರೆ, ಈ ರೀತಿ ಆಗಬಾರದಿತ್ತು ಎಂದು ಹೇಳಿದ್ದಾರೆ.
ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ದೇಶದ ರೈತರಲ್ಲಿ ಆಕ್ರೋಶವಿದೆ. ಎಂ.ಎಸ್.ಪಿ. ಜಾರಿಗೆ ರೈತರು ಒತ್ತಡ ಹಾಕುತ್ತಿದ್ದಾರೆ. ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುವ ಕೆಲವರ ಈ ರೀತಿಯ ವರ್ತನೆಯಿಂದ ಬೇರೆಯವರಿಗೂ ತೊಂದರೆಯಾಗುತ್ತದೆ. ಎಪಿಎಂಸಿಯಲ್ಲಿ ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ರೀತಿ ಮಾಡಬಾರದು, ಅದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.