ಬೆಂಗಳೂರು: ಎಪಿಎಂಸಿ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡ ಕಿರುಚಿತ್ರ ನಿರ್ಮಾಣ ಮಾಡಲಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೃಷಿ ಮಾರಾಟ ಮಂಡಳಿಯ ಪ್ರಧಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಅವುಗಳ ಸಾಧನೆ ಬಗ್ಗೆ, ಅಲ್ಲಿನ ಉತ್ಪನ್ನಗಳು ಹಾಗೂ ಅದರ ವೈಶಿಷ್ಟ್ಯದ ಬಗ್ಗೆ ಕಿರುಚಿತ್ರ ನಿರ್ಮಾಣ ಮಾಡಿ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿರು, ಸದಾನಂದ ಗೌಡ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಎಪಿಎಂಸಿಗಳ ಮಹತ್ವ ಏನು..? ಯಾವ ಯಾವ ಎಪಿಎಂಸಿಗಳು ಯಾವುದಕ್ಕೆ ಪ್ರಖ್ಯಾತಿ ಪಡೆದಿದೆ…? ಅಲ್ಲಿಗೆ ಬರುವ ಪ್ರಮುಖ ಉತ್ಪನ್ನಗಳು ಯಾವುವು..? ಅವು ಯಾವ ಯಾವ ಕಡೆ ರಫ್ತಾಗುತ್ತದೆ.? ಯಾವ ಕಾರಣಕ್ಕೆ ಉಪಯೋಗವಾಗುತ್ತದೆ ಎಂಬಿತ್ಯಾದಿ ಮಾಹಿತಿಗಳುಳ್ಳ ಉತ್ಪನ್ನಗಳು ಹಾಗೂ ಅದರ ವೈಶಿಷ್ಟ್ಯದ ಬಗ್ಗೆ ಕಿರುಚಿತ್ರ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಆಗುವ ಅನುಕೂಲಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ನೀಡಲಾಗಿದೆ. ಇನ್ನು ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ರೈತರಿಗೆ ಅರಿವು ಮೂಡಿಸಲಾಗುವುದು. ಇದಕ್ಕೋಸ್ಕರವೇ ಕಿರುಚಿತ್ರ ನಿರ್ಮಾಣ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.
ಎಪಿಎಂಸಿಯಲ್ಲಿ ಶುಲ್ಕ ಭರಿಸಲು ಏಕರೂಪ ನೀತಿಗೆ ಚಿಂತನೆ
ಎಪಿಎಂಸಿ ಕಾಯ್ದೆ ಬದಲಾವಣೆಗೂ ಸರ್ಕಾರ ಬದ್ಧವಾಗಿದೆ. ಎಪಿಎಂಸಿ ಒಳಗೆ ಹಾಗೂ ಹೊರಗೆ ಮಾರಾಟ ಮಾಡಲು ಏಕರೂಪ ನೀತಿ ಅಳವಡಿಸುವ ಬಗ್ಗೆ ಚಿಂತನೆ ಮಾಡುತ್ತೇವೆ. ಇನ್ನು ಎಲ್ಲ 162 ಎಪಿಎಂಸಿಗಳಿಗೂ ನಾನು ಭೇಟಿ ನೀಡಿ ಅವಹಾಲುಗಳನ್ನು ಆಲಿಸಲಿದ್ದೇನೆ.
ಈಗಿರುವ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು? ಯಾವ ಬದಲಾವಣೆಗಳನ್ನು ತಂದರೆ ಏನು ಮಾಡಬಹುದು? ಅಧಿಕಾರ ವಿಕೇಂದ್ರೀಕರಣ ಮಾಡಿ ಸ್ಥಳೀಯವಾಗಿ ಯಾವ ರೀತಿ ಅಧಿಕಾರ ನೀಡಬಹುದು ಎಂಬುದರ ಬಗ್ಗೆ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಇರುವವರೆಗೂ ಎಪಿಎಂಸಿ ಮುಚ್ಚಲು ಬಿಡಲ್ಲ
ಎಪಿಎಂಸಿ ವ್ಯವಸ್ಥೆ ಬಹಳ ದೊಡ್ಡದು. ಇದನ್ನು ದುರ್ಬಲಗೊಳಿಸುವುದು ಹಾಗೂ ಮುಚ್ಚುವುದು ಸರ್ಕಾರದ ಉದ್ದೇಶವಿಲ್ಲ. ಎಪಿಎಂಸಿಗಳನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಗೂ ನಾನು ಇರುವವರೆಗೂ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಹಾಲಿ ಎಪಿಎಂಸಿಯಲ್ಲಿ ವಹಿವಾಟು ನಡೆಸಿದರೆ 60 ಪೈಸೆ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ದೊರೆತಿದೆ. ಇನ್ನು ಕೇಂದ್ರ ಸರ್ಕಾರ ಮಾರ್ಗಸೂಚಿ 10 ದಿನಗಳಲ್ಲಿ ಬರುವ ಸಾಧ್ಯತೆ ಇದ್ದು, ಅದು ಬಂದ ಮೇಲೆ ಎಪಿಎಂಸಿ ಹೊರಗೂ ಸಹ 60 ಪೈಸೆ ಶುಲ್ಕ ವಿಧಿಸುವ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಎಪಿಎಂಸಿ ನಿರ್ದೇಶಕರಾದ ಕರಿಗೌಡ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ಸದಸ್ಯರು ಭಾಗವಹಿಸಿದ್ದರು.