ಬೆಂಗಳೂರು: ಪಡಿತರ ಪಡೆಯಲು ಎಪಿಎಲ್ ಕಾರ್ಡ್ ದಾರರು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಅಂತಹ ಕಾರ್ಡ್ ಗಳಿಗೆ ಪಡಿತರ ನೀಡುವುದನ್ನು ನಿಲ್ಲಿಸಲು ಆಹಾರ ಇಲಾಖೆ ನಿರ್ಧರಿಸಿದೆ.
ರಾಜ್ಯಾದ್ಯಂತ ಸುಮಾರು 24 ಲಕ್ಷ ಎಪಿಎಲ್ ಕಾರ್ಡ್ ಗಳಿದ್ದು, ಶೇಕಡ 80ರಷ್ಟು ಕಾರ್ಡ್ ದಾರರು ಪ್ರತಿ ತಿಂಗಳು ಪಡಿತರ ಪಡೆದುಕೊಳ್ಳುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ಪಡಿತರಕ್ಕೆ ಎಂಬುದನ್ನು ಪ್ರತ್ಯೇಕವಾಗಿ ನಮೂದಿಸಿ ಪಡಿತರ ಚೀಟಿ ನೀಡಲಾಗುತ್ತದೆ.
ಗುರುತಿನ ಚೀಟಿಗಾಗಿ ಎಪಿಎಲ್ ಕಾರ್ಡ್ ಪಡೆಯುವವರಿಗೆ ಪಡಿತರ ಸಿಗುವುದಿಲ್ಲ. ಎಪಿಎಲ್ ಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಿ ಬಿಪಿಎಲ್ ಕಾರ್ಡ್ ದಾರರಿಗೆ ಬೇರೆ ಪಡಿತರ ನೀಡುವ ಚಿಂತನೆ ಇದೆ. ಬಹುತೇಕ ಎಪಿಎಲ್ ಕಾರ್ಡ್ ದಾರರು ಪಡಿತರ ಪಡೆದುಕೊಳ್ಳದ ಕಾರಣ ಇದನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವರು ಎಪಿಎಲ್ ಕಾರ್ಡ್ ಅಕ್ಕಿಯನ್ನು ಪಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 35 – 50 ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ.
ಪಡಿತರ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಚಿಂತನೆ ನಡೆದಿತ್ತು. ಈಗ ಪಡಿತರ ಕೊಡುವುದನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಪಡಿತರ ಪಡೆಯದ ಕಾರ್ಡ್ ಗಗಳನ್ನು ರದ್ದು ಮಾಡಿದರೆ ನ್ಯಾಯಬೆಲೆ ಅಂಗಡಿಗಳ ಕಾರ್ಡ್ ಸಂಖ್ಯೆ ಕಡಿಮೆಯಾಗಿ ಕಮಿಷನ್ ಹಣ ಕಡಿತವಾಗುತ್ತದೆ. ಕಾರ್ಡ್ ರದ್ದು ಮಾಡುವ ಬದಲು ಅವಶ್ಯಕತೆ ಇರುವವರಿಗೆ ಕೆಜಿಗೆ 15 ರೂ. ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ವಿತರಿಸಲು ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಪಡಿತರ ವಿತರಕರಿಂದ ಕೇಳಿ ಬಂದಿದೆ.