ಬೆಂಗಳೂರು: ಅಕ್ಕಿ ಸೇರಿದಂತೆ ಧಾನ್ಯಗಳ ಬೆಲೆ ದುಬಾರಿಯಾಗಿದ್ದು, ಎಪಿಎಲ್ ಕಾರ್ಡ್ ದಾರದಿಂದ ಪಡಿತರ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಡ್ ಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು ಎಪಿಎಲ್ ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಜಾರಿಯಾದ ನಂತರ ಕಾರ್ಡ್ ಚಾಲ್ತಿಯಲ್ಲಿಡಲು ಹೆಚ್ಚಿನ ಜನ ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು 24 ಲಕ್ಷ ಎಪಿಎಲ್ ಕಾರ್ಡ್ ವಿತರಿಸಿದ್ದು, ಪ್ರತಿ ತಿಂಗಳು 20 ಸಾವಿರ ಕಾರ್ಡ್ ದಾರರು ಪಡಿತರ ಪಡೆಯುತ್ತಿದ್ದರು. ಈಗ ಹೆಚ್ಚಿನ ಸಂಖ್ಯೆಯ ಕಾರ್ಡ್ ದಾರರು ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರತೊಡಗಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿದವರು ಪ್ರತಿ ತಿಂಗಳು ಪಡಿತರ ಪಡೆಯಬೇಕು. ಎಪಿಎಲ್ ಕಾರ್ಡ್ ದಾರರು ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಪಡಿತರ ಪಡೆದುಕೊಂಡು ಕಾರ್ಡುಗಳನ್ನು ಸಕ್ರಿಯವಾಗಿಟ್ಟುಕೊಳ್ಳಬೇಕಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಯ ಕಾರ್ಡ್ ದಾರರ ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಇಂಡೆಂಟ್ ನೀಡಿ ಪಡಿತರ ತರಿಸಿಕೊಳ್ಳುತ್ತಾರೆ. ಎಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೆ 5 ಕೆಜಿಯಂತೆ ಒಂದು ಕಾರ್ಡ್ ಗೆ ಗರಿಷ್ಠ 10 ಕೆಜಿ ಅಕ್ಕಿಯನ್ನು ಕೆಜಿಗೆ 15 ರೂ. ದರದಲ್ಲಿ ನೀಡಲಾಗುತ್ತದೆ.