ಬೆಂಗಳೂರು: ಖ್ಯಾತ ನಿರೂಪಕಿ, ನಟಿ ಅಪರ್ಣಾ ಶ್ವಾಸಕೋಶ ಕ್ಯಾನ್ಸರ್ ನಿಂದ ನಿಧನ ಹೊಂದಿದ್ದಾರೆ. ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ ಅವರ ಧ್ವನಿ ಸದಾ ಚಿರಸ್ಥಾಯಿಯಾಗಬೇಕು ಎಂದು ನಟ ಸೃಜನ್ ಲೋಕೇಶ್ ಮೆಟ್ರೋ ಸಿಬ್ಬಂದಿಗಳಲ್ಲಿ ಮನವಿ ಮಾಡಿದ್ದಾರೆ.
ಅಪರ್ಣಾ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಬಿಎಂಆರ್ ಸಿಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಭೇಟಿಯಾದ ನಟ ಸೃಜನ್ ಲೋಕೇಶ್, ನಮ್ಮ ಮೆಟ್ರೋದಲ್ಲಿ ಅಪರ್ಣಾ ಧ್ವನಿ ಯಾವಾಗಲೂ ಇರಬೇಕು. ಆ ವಾಯ್ಸ್ ಕೇಳಿದಾಗ ಅಪರ್ಣಾ ನೆನಪಾಗಬೇಕು. ಅವರ ಧ್ವನಿಗೆ ಬೇರಾರೂ ಸಾಟಿಯಿಲ್ಲ. ಹಾಗಾಗಿ ಅವರ ಧ್ವನಿ ಚಿರಸ್ಥಾಯಿಯಾಗಿರುವಂತೆ ಮೆಟ್ರೋದಲ್ಲಿ ಅವರ ಧ್ವನಿ ಸದಾ ಇರಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಸೃಜನ್ ಲೋಕೇಶ್, ಅಪರ್ಣಾ ಅವರಿಗೆ ಅವರೇ ಸಾಟಿ. ಕನ್ನಡ ಪದಗಳ ಉಚ್ಛಾರಣೆ, ಅವರಿಗೆ ಇರುವ ಜ್ಞಾನ, ನಿರೂಪಣೆಯಲ್ಲಿ ನೈಪುಣ್ಯತೆ ಅದನ್ನು ಬೇರಾರೂ ತುಂಬಲು ಸಾಧ್ಯವಿಲ್ಲ. ಮೆಟ್ರೋದಲ್ಲಿ ಯಾವಾಗಲು ಅವರ ಧ್ವನಿ ಇರಲಿ ಎಂಬುದು ನಮ್ಮ ಮನವಿ. ಅಪರ್ಣಾ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಗ್ಗೆ ನಮಗೆ ತಿಳಿದಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಈಗ ಏಕಾಏಕಿ ನಮ್ಮನ್ನು ಅಗಲಿದ್ದು ದು:ಖ ತಂದಿದೆ ಎಂದು ಕಂಬನಿ ಮಿಡಿದಿದ್ದಾರೆ.