ಆಂಧ್ರಪ್ರದೇಶ ಸರ್ಕಾರ ಉರ್ದುವನ್ನು ಮಾನ್ಯತೆ ಪಡೆದ ಎರಡನೇ ಅಧಿಕೃತ ಭಾಷೆಯೆಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಸೇವೆಯ ಪ್ರಧಾನ ಕಾರ್ಯದರ್ಶಿ ರಜತ್ ಭಾರ್ಗವ ಅಧಿಸೂಚನೆಯಲ್ಲಿ ಇದನ್ನು ಪ್ರಕಟಿಸಿದ್ದಾರೆ.
ಮಾರ್ಚ್ ನಲ್ಲಿ ನಡೆದ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಉರ್ದುವನ್ನು ಎರಡನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಈಗ ಈ ಕುರಿತು ಅಧಿಸೂಚನೆ ಹೊರಬಿದ್ದಿದೆ.
ಅವಿಭಜಿತ ಆಂಧ್ರಪ್ರದೇಶದ ಈಗ ಆಂಧ್ರಪ್ರದೇಶಕ್ಕೆ ಸೇರಿರುವ 15 ಜಿಲ್ಲೆಗಳಲ್ಲಿ ಉರ್ದು ಎರಡನೇ ಮಾನ್ಯತೆ ಪಡೆದ ಭಾಷೆಯಾಗಿತ್ತು. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯ ವಿಭಜನೆಯಾದಾಗ ತೆಲಂಗಾಣ, ಉರ್ದುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಿತ್ತು. ಆದರೆ ಆಂಧ್ರಪ್ರದೇಶ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಇದೀಗ ಎಲ್ಲ ಜಿಲ್ಲೆಗಳಿಗೆ ಅನ್ವಯವಾಗುವಂತೆ ಉರ್ದುವಿಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆಯನ್ನು ನೀಡಲಾಗಿದೆ.