
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ವಿದೇಶಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಕೃಷ್ಣಪಟ್ಟಣಂ ಬಂದರಿಗೆ ಭೇಟಿ ನೀಡುತ್ತಿದ್ದ ವಿದೇಶಿ ಯುವತಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಬಂದರಿಗೆ ಭೇಟಿ ನೀಡುತ್ತಿದ್ದ ಯುವತಿಯ ಮೇಲೆ ಸೈದಾಪುರದ ರಾವೂರ್ ರಸ್ತೆಯಲ್ಲಿ ಕೆಲವು ಅಪರಿಚಿತ ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೈದಾಪುರಂ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮಾಹಿತಿ ಪ್ರಕಾರ, ವಿದೇಶಿ ಮಹಿಳೆಯೊಬ್ಬರು ಕೃಷ್ಣಪಟ್ಟಣಂ ಬಂದರಿಗೆ ಭೇಟಿ ನೀಡುತ್ತಿದ್ದ ವೇಳೆ ಕ್ಯಾಬ್ ಚಾಲಕ ಆಕೆಯನ್ನು ಸೈದಾಪುರದ ಗಣಿಗಾರಿಕೆ ಕ್ವಾರಿಗೆ ಕರೆದೊಯ್ದಿದ್ದ. ನಂತರ ಆತ ಸಹಚರರೊಂದಿಗೆ ಸೇರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಕೂಗಾಡಿದಾಗ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.